ಬೆಂಗಳೂರು : ಹಿಂಗಾರು ಹಂಗಾಮಿನ ನೀರಾವರಿಗಾಗಿ ಕೃಷ್ಣಾ ಮೇಲ್ದಂಡೆಯ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಆಲಮಟ್ಟಿಯಲ್ಲಿ 2020 - 21ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗಿತ್ತು. 2020, ಡಿಸೆಂಬರ್ 1 ರಿಂದ 2021, ಮಾರ್ಚ್ 21 ರವರೆಗೆ ಚಾಲೂ - ಬಂದ ಪದ್ಧತಿಯನ್ನು ಅನುಸರಿಸಿ ಲಘು ನೀರಾವರಿ ಬೆಳೆಗಳಿಗೆ ನೀರು ಪೂರೈಸುವುದಾಗಿ ನಿರ್ಧರಿಸಲಾಗಿತ್ತು. 2020, ಡಿಸೆಂಬರ್ 1 ರಂದು ಆಲಮಟ್ಟಿ ಜಲಾಶಯದಲ್ಲಿ ಹೋದ ಸಾಲಿಗೆ ಹೋಲಿಸಿದಾಗ 2 ಜಲಾಶಯಗಳ ನೀರಿನ ಸಂಗ್ರಹಣೆಯಲ್ಲಿ 7.37 ಟಿ.ಎಂ.ಸಿ ಕೊರತೆ ಇತ್ತು. ಈ ವರ್ಷ ಮಿತವಯ್ಯವನ್ನು ಸಾಧಿಸಿ 2021 ಮಾರ್ಚ್ 12 ರಂದು ಸದರಿ ಕೊರತೆಯನ್ನು 2.80 ಟಿಎಂಸಿ ಗೆ ಸಿಮೀತಗೊಳಿಸಲಾಗಿದೆ.
2021, ಮಾರ್ಚ್ 22 ರ ನಂತರ ಹಿಂಗಾರು ಹಂಗಾಮಿನ ಮುಂದುವರಿದ ನೀರಾವರಿ ಸಲಹಾ ಸಮಿತಿ ಸಭೆಯನ್ನು ನಡೆಸುವುದಾಗಿ ತಿಳಿಸಲಾಗಿತ್ತು. ವಿಧಾನಸಭೆ ಕಲಾಪಗಳು ಇರುವುದರಿಂದ ಹಾಗೂ ಕೋವಿಡ್-19 ರ ಹಿನ್ನೆಲೆಯಲ್ಲಿ ಮುಖ್ಯ ಇಂಜಿನಿಯರ್ ಅವರು ಕೃಭಾಜನಿಸಿ ಅಣೆಕಟ್ಟು ವಲಯ ಆಲಮಟ್ಟಿ ಇವರಿಂದ ವಿವರಗಳನ್ನು ಪಡೆಯಲಾಗಿದ್ದು, 2021, ಮಾರ್ಚ್ 12 ರಂದು 2 ಜಲಾಶಯಗಳ ಜೀವ ಜಲವು 40.04 ಟಿಎಂಸಿ ಇದ್ದು, ಬಾಕಿ ಉಳಿದಿರುವ ನೀರಾವರಿ ದಿನಗಳಿಗೆ ಹಾಗೂ 2021, ಜೂನ್ 30 ರವರೆಗೆ ಅಗತ್ಯ ಬಳಕೆಗೆ 24.105 ಟಿ.ಎಂ.ಸಿ ನೀರಿನ ಅವಶ್ಯಕತೆ ಇರುವುದು. 15.895 ಟಿಎಂಸಿ (40.00 - 24.105) ನೀರಿನ ಸಂಗ್ರಹಣೆ ಇರುವದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ಜಾಲಗಳಿಗೆ ಮಾರ್ಚ್ 22 ರಿಂದ ಮಾರ್ಚ್ 31 ರವರೆಗೆ 10 ದಿನಗಳ ವರೆಗೆ ಹಿಂಗಾರು ಹಂಗಾಮಿನ ನೀರಾವರಿ ಅವಧಿಯನ್ನು ವಿಸ್ತರಿಸಲು 12.00 ಟಿಎಂಸಿ ನೀರನ್ನು ಬಳಕೆ ಮಾಡಲು ಅನುಮತಿ ನೀಡಲಾಗಿದೆ.
ಏಪ್ರಿಲ್ 1 ರಿಂದ ಕ್ಲೋಜರ್ ಅವಧಿ ಕಾಮಗಾರಿಯ ಪ್ರಕ್ರಿಯೆಗಳನ್ನು ಪ್ರಾರಂಭಿಸಿ ಜೂನ್ 15 ರೊಳಗೆ ಮುಖ್ಯ ಸ್ಥಾವರ, ಗೇಟ್‌ಗಳು ಹಾಗೂ ಕಾಲುವೆ ಜಾಲವನ್ನು ಸಂರಕ್ಷಿಸಲು ಮತ್ತು ಅಗತ್ಯ ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು 2021-22 ನೇ ಸಾಲಿನ ಮುಂಗಾರು ಹಂಗಾಮಿಗೆ ಅನುವುಗೊಳಿಸಲು ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರು ತಿಳಿಸಿದ್ದಾರೆ.