ಬೆಂಗಳೂರು: ಮೋದಿ ಆಳ್ವಿಕೆಯಲ್ಲಿಯೇ ಬೆಂಗಳೂರು ಮೈಸೂರು ದಶಪಥ ರಸ್ತೆಗೆ ಅಡಿಗಲ್ಲು ಹಾಕಿ ಅವರ ಆಳ್ವಿಕೆಯಲ್ಲಿಯೇ ಎಕ್ಸ್ಪ್ರೆಸ್ ವೇ ಉದ್ಘಾಟನೆ ಮಾಡಲಾಗುತ್ತಿದ್ದು, ಇದರ ಸಂಪೂರ್ಣ ಶ್ರೇಯ ಮೋದಿ ಸರ್ಕಾರಕ್ಕೆ ಸಲ್ಲಲಿದೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ದಶಪಥ ಹೆದ್ದಾರಿ ಬಿಜೆಪಿಯ ಕನಸಿನ ಕೂಸು: ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಪ್ರಧಾನಿ ಮೋದಿ ಬೆಂಗಳೂರು ಮೈಸೂರು ದಶಪಥ ರಸ್ತೆ ಲೋಕಾರ್ಪಣೆ ಮಾಡುತ್ತಿದ್ದಾರೆ. ದಶಪಥ ಹೆದ್ದಾರಿ ಬಿಜೆಪಿಯ ಕನಸಿನ ಕೂಸು, ಹೈವೇ ಆಗಬೇಕು ಎನ್ನುವುದು ದಶಕಗಳ ಕನಸು, 1995ರಲ್ಲಿ ಅಂದಿನ ದೇವೇಗೌಡರು ದಶಪಥದ ಕನಸು ಕಂಡು ನೈಸ್ ಸಂಸ್ಥೆಯನ್ನು ತಂದರು. ಆದರೆ ನೈಸ್ ಬೆಂಗಳೂರು, ಬಿಡದಿ ಬಿಟ್ಟು ಮುಂದೆ ಸಾಗಲಿಲ್ಲ. ಒಂದು ವೇಳೆ ಆಗಲೇ ದಶಪಥ ಆಗಿದ್ದರೆ ಚಿತ್ರಣವೇ ಬೇರೆ ಇರುತ್ತಿತ್ತು ಎಂದು ಹೇಳಿದರು.
ಬೆಂಗಳೂರಿನಷ್ಟೇ ಆದ್ಯತೆ ಮೈಸೂರಿಗೆ ನೀಡಬೇಕು ಎಂದು ಮೋದಿಗೆ ಒತ್ತಾಯ ಮಾಡಿದೆವು ಹಾಗಾಗಿ 2018ರಲ್ಲಿ ಫೆ.19ರಲ್ಲಿ ದಶಪಥ ಘೋಷಣೆ ಮಾಡಿದರು. ಮರುದಿನವೇ ಸಂಪುಟ ಉಪಸಮಿತಿಯಲ್ಲಿ ದಶಪಥ ರಸ್ತೆಗೆ ಆರ್ಥಿಕ ಅನುಮೋದನೆ ನೀಡಲಾಯಿತು. 2018ರ ಮಾರ್ಚ್ನಲ್ಲಿ ಯಶವಂತಪುರದಲ್ಲಿ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಯಿತು. ಮೋದಿ 2018ರ ಫೆಬ್ರವರಿಯಲ್ಲಿ ಘೋಷಿಸಿ, ಮಾರ್ಚ್ ನಲ್ಲಿ ಶಿಲಾನ್ಯಾಸ ಮಾಡಿ 2023ರ ಮಾರ್ಚ್ನಲ್ಲೇ ಉದ್ಘಾಟನೆಯಾಗುತ್ತಿದೆ.
90ನಿಮಿಷದಲ್ಲೇ ಬೆಂಗಳೂರಿನಿಂದ ಮೈಸೂರು ತಲುಪಬಹುದು: ಇದು ಐತಿಹಾಸಿಕ ಯೋಜನೆ, ಸಹಜವಾಗಿ ಎಲ್ಲ ಕಾರ್ಯಕ್ರಮ ಶಿಲಾನ್ಯಾಸ ಮಾಡುವುದು, ನಂತರ ಶಿಲೆಗಳೇ ಮಾಯವಾಗುತ್ತಿದ್ದವು, ಆದರೆ ಮೋದಿ ಘೋಷಿಸಿದ ಯೋಜನೆಯನ್ನು ಅವರೇ ಇಲ್ಲಿ ಉದ್ಘಾಟನೆಯನ್ನೂ ಮಾಡುತ್ತಿದ್ದಾರೆ. 9,500 ಕೋಟಿ ವೆಚ್ಚದ ಯೋಜನೆಯಾಗಿದೆ. ಮೊದಲ ಹಂತದ 56 ಕಿಲೋಮೀಟರ್ ಯೋಜನೆಗೆ 4428 ಕೋಟಿ ವೆಚ್ಚ, ಎರಡನೇ ಹಂತದ 61 ಕಿಲೋಮೀಟರ್ ಗೆ 4500 ಕೋಟಿ ಖರ್ಚು ಮಾಡಲಾಗಿದೆ. ಮೊದಲು ಇದು ದ್ವಿಪಥದ ರಸ್ತೆ ಇತ್ತು. ಬೆಂಗಳೂರಿನಿಂದ ಮೈಸೂರಿಗೆ ತೆರಳಲು ನಾಲ್ಕು ಗಂಟೆ ತೆಗೆದುಕೊಳ್ಳುತ್ತಿತ್ತು. ದಸರಾ ವೇಳೆ ಐದಾರು ಗಂಟೆಯಾದರೂ ಹೋಗದಷ್ಟು ಸಮಸ್ಯೆ ಇತ್ತು. ಆದರೆ, ಈಗ ಕೇವಲ 90 ನಿಮಿಷದಲ್ಲೇ ಬೆಂಗಳೂರಿನಿಂದ ಮೈಸೂರು ತಲುಪಬಹುದಾಗಿದೆ ಎಂದರು.
ಟಾರ್ಗೆಟ್ ಕರ್ನಾಟಕ: ಇವತ್ತು ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿಗಳ ಸಭೆ ನಡೆಯಿತು. ಬಿಜೆಪಿಯಲ್ಲಿ ಚುನಾವಣೆಗೆ 32 ವಿಭಾಗಗಗಳನ್ನು ರಚಿಸಿದ್ದೇವೆ. ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಒಂದಾದ ನಂತರ ಒಂದು ಚುನಾವಣೆ ಗೆದ್ದಿದ್ದೇವೆ. ಉತ್ತರಪ್ರದೇಶ, ಗುಜರಾತ್, ತ್ರಿಪುರ, ನಾಗಲ್ಯಾಂಡ್, ಮೇಘಾಲಯಗಳಲ್ಲಿ ಬಿಜೆಪಿ ಗೆದ್ದಿದೆ, ಈಶಾನ್ಯ ರಾಜ್ಯಗಳಲ್ಲಿ 2014ಕ್ಕೂ ಮುನ್ನ ಕೆಟ್ಟ ಸ್ಥಿತಿ ಇತ್ತು. ಭಯೋತ್ಪಾದನೆ, ಬಡತನ, ಅನಕ್ಷರತೆ, ಮೂಲಸೌಕರ್ಯಗಳ ಕೊರತೆ ಇತ್ತು. ಆದರೆ, ಈಗ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದು ಹೇಳಿದರು.
ಈಗ ನಮ್ಮ ಟಾರ್ಗೆಟ್ ದಕ್ಷಿಣ ಭಾರತ, ನಮ್ಮ ಟಾರ್ಗೆಟ್ ಕರ್ನಾಟಕ, ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಕಾಣಿಸುತ್ತಿದೆ. ವಿಜಯ ಸಂಕಲ್ಪ ಯಾತ್ರೆಗಳಿಗೆ ನಿರೀಕ್ಷೆ ಮೀರಿ ಜನಸ್ಪಂದನೆ ಸಿಗುತ್ತಿದೆ. ಕಾಂಗ್ರೆಸ್,ಜೆಡಿಎಸ್ ಕೂಡ ರಥಯಾತ್ರೆ ಮಾಡುತ್ತಿವೆ. ಆದರೆ ಜನಬೆಂಬಲ ನಮಗೆ ಸಿಗುತ್ತಿದೆ. ಅಮಿತ್ ಶಾ, ನಡ್ಡಾ ಯಾತ್ರೆಗೆ ಯಶಸ್ಸು ಸಿಕ್ಕಿದೆ ಸಿಎಂ, ಬಿಎಸ್ವೈ ಕೆಲವು ಕಡೆ ಮಾತ್ರ ಹೋಗಿದ್ದಾರೆ ರಾಜ್ಯಾಧ್ಯಕ್ಷರು ಕೆಲವು ಕಡೆ ಹೋಗಿದ್ದಾರೆ ಆದರೂ ಎಲ್ಲಾ ಕಡೆ ನಮಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ ಎಂದರು.
ಇದನ್ನೂ ಓದಿ: ಮಾಡಾಳ್ ತಪ್ಪು ಮಾಡಿದ್ದಾರೆ, ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿದೆ: ಶೋಭಾ ಕರಂದ್ಲಾಜೆ