ಬೆಂಗಳೂರು: ಕೊರೊನಾ ಆತಂಕದ ನಡುವೆ ರೈಲುಗಳ ಓಡಾಡ ಪ್ರಾರಂಭವಾಗಿದ್ದು, ಈ ನಡುವೆ ಭಾರತೀಯ ರೈಲ್ವೆ ಇಲಾಖೆ ಮತ್ತೊಂದು ಹೊಸ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಸಮಯಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ, ಮತ್ತಷ್ಟು ಜನಹಿತ ನಿರ್ಧಾರಗಳನ್ನು ಕೈಗೆತ್ತಿಕೊಳ್ಳುವಲ್ಲಿ ಭಾರತೀಯ ರೈಲ್ವೆ ಇಲಾಖೆ ಚಿಂತನೆ ನಡೆಸಿದೆ. ಈ ಮೂಲಕ ಕೆಲವು ಸಾಮಾನ್ಯ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತನೆ ಮಾಡುವ ಹಾಗೂ ವೇಗವನ್ನು ಹೆಚ್ಚಿಸುವ ನಿರ್ಧಾರಕ್ಕೆ ಮುಂದಾಗಿದೆ.
ಈಗಾಗಲೇ ಈ ಕುರಿತು ರೈಲ್ವೆ ಇಲಾಖೆ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದು, ದೇಶಾದ್ಯಂತ ಚಲಿಸುತ್ತಿರುವ 360 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಪರಿವರ್ತಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. 360 ಪ್ಯಾಸೆಂಜರ್ ರೈಲುಗಳನ್ನ ಎಕ್ಸ್‌ಪ್ರೆಸ್ ರೈಲುಗಳನ್ನಾಗಿ ಹಾಗೂ 120 ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್‌ಫಾಸ್ಟ್ ದರ್ಜೆಗೆ ಏರಿಸುವ ಉದ್ದೇಶವಿದ್ದು, ಇದಕ್ಕೆ ಶೀಘ್ರವೇ ರೈಲ್ವೆ ಸಚಿವಾಲಯ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ.
ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಮಾರ್ಪಡಿಸುವುದರಿಂದ ಸಮಯ ಉಳಿತಾಯ ಮಾಡುವ ಗುರಿ ಹೊಂದಿದೆ. ಅದರ ಜೊತೆಗೆ ಯಾವುದೇ ರೀತಿಯ ನಿಲ್ದಾಣಗಳ ಹಾಗೂ ಉಪ-ನಗರ ಅಥವಾ ಗ್ರಾಮೀಣ ಪ್ರದೇಶದ ಪ್ರಯಾಣಿಕರ ಸೌಲಭ್ಯಕ್ಕೆ ಧಕ್ಕೆಯಾಗದಂತೆ ಯೋಜನೆ ರೂಪಿಸಲಾಗಿದೆ.
ಪ್ರಯಾಣಿಕರ ಸಂಖ್ಯೆ ಗಣನೀಯ ಕಡಿಮೆಯಿರುವ ನಿಲ್ದಾಣಗಳ ನಿಲುಗಡೆ ಕಡಿತ ಮಾಡಿ, ವೇಗ ಹೆಚ್ಚಿಸುವತ್ತ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯಾವೊಬ್ಬ ಪ್ರಯಾಣಿಕರು ಹತ್ತುವುದು ಇಳಿಯುವುದನ್ನು ಮಾಡದೇ ಇದ್ದಲ್ಲಿ, ಅಂತಹ ನಿಲ್ದಾಣಗಳ ನಿಲುಗಡೆಯನ್ನು ರದ್ದು ಮಾಡುವ ಕುರಿತು ಚಿಂತನೆ ನಡೆದಿದೆ.
ವೇಗ ಹೆಚ್ಚಿಸುವ ಹಾಗೂ ಪ್ಯಾಸೆಂಜರ್ ರೈಲನ್ನು ಎಕ್ಸ್‌ಪ್ರೆಸ್ ರೈಲುಗಳಾಗಿ ಮಾರ್ಪಡಿಸುವುದರಿಂದ ಸಮಸ್ಯೆ ಉಂಟಾಗುವುದಿಲ್ಲ. ಅಲ್ಲದೇ ಸಮಯ ಮತ್ತು ವೇಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬುದು ಅಧಿಕಾರಿಗಳ ಮಾತು. ಆದರೆ ಗ್ರಾಮೀಣ ಭಾಗದ ಜನರು ರೈಲ್ವೆ ಸೇವೆಯನ್ನು ಹೆಚ್ಚಾಗಿ ಅವಲಂಬಿಸಿದ್ದು, ಕರ್ನಾಟಕ ರಾಜ್ಯದ ಬಹುತೇಕ ಹಳ್ಳಿಗಳಿಗೆ ಇದು ಜೀವನಾಡಿ ಸಾರಿಗೆ ವ್ಯವಸ್ಥೆಯಾಗಿದೆ. ರೈಲ್ವೆ ಇಲಾಖೆಯ ಈ ನಿರ್ಧಾರವು, ಹಳ್ಳಿ ಜನರಿಗೆ ಸಮಸ್ಯೆಯನ್ನುಂಟು ಮಾಡುವ ಸಾಧ್ಯತೆಯಿದೆ...