ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಆಖಾಡದಿಂದ ಡಿ ಕೆ ಸಹೋದರರನ್ನು ಕ್ಷೇತ್ರದಿಂದ ಹೊರ ಹಾಕುವಂತೆ ಚುನಾವಣಾ ಆಯೋಗಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ನಗರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 19 ರಂದು ಮುನಿರತ್ನ ಚುನಾವಣಾ ಅಯೋಗಕ್ಕೆ ದೂರು ಸಲ್ಲಿಸಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಆಖಾಡದಿಂದ ಡಿಕೆ ಬ್ರದರ್ಸ್‌ಅನ್ನು ಹೊರಗೆ ಕಳಿಸಿ ಎಂದು ಒತ್ತಾಯಿಸಿದರು.
ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ, ಆದ್ರೆ ಕಾಂಗ್ರೆಸ್ನವರು ಗೆಲ್ಲಬೇಕು ಎಂದು ವಾತಾವರಣ ಕೆಡಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಚುನಾವಣೆ ನಡೆಯುತ್ತಿದ್ದು, ಅವರ ಆಸ್ತಿತ್ವ ಉಳಿಸಿಕೊಳ್ಳಲು ಅಕ್ರಮಗಳ ಮೇಲೆ ಅಕ್ರಮ ಮಾಡುತ್ತಿದ್ದಾರೆ. ಅಕ್ಟೋಬರ್ 19 ರಂದು ಮುನಿರತ್ನ ಚುನಾವಣಾ ಅಯೋಗಕ್ಕೆ ದೂರು ಸಲ್ಲಿಸಿದ್ದು, ಅದರಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕಾಂಗ್ರೆಸ್ ವೋಟರ್ ಐಡಿ ಕಾರ್ಡ್‌ಗಳನ್ನು ಸಂಗ್ರಹಿಸಿ ನಮ್ಮ ಅಭ್ಯರ್ಥಿ ಮೇಲೆ ಹೊರೆಸಿದ್ದಾರೆ ಎಂದು ಶೋಭಾ ಆರೋಪಿಸಿದರು.
ಎಂಎಲ್‌ಸಿ ನಾರಾಯಣಸ್ವಾಮಿ ಅವರು ವೋಟರ್ ಐಡಿ ಕಾರ್ಡ್‌ಗಳನ್ನು ಸಂಗ್ರಹಿಸಿರುವ ಮಾಹಿತಿ ನೀಡಿದ್ದಾರೆ. ನಾರಾಯಣಸ್ವಾಮಿ ಹಾಗೂ ಇತರರು ಒಂದು ಸಾವಿರಕ್ಕೂ ಹೆಚ್ಚು ಐಡಿ ಕಾರ್ಡ್‌ಗಳನ್ನು ಸಂಗ್ರಹಿಸಿ ಚಿತ್ರೀಕರಣ ಮಾಡಿ ಅಯೋಗಕ್ಕೆ ನೀಡಿದ್ದಾರೆ. ಅದು ಸರಿಯಲ್ಲ ಎಂಬುದು ಈಗಾಗಲೇ ಅಯೋಗಕ್ಕೂ ಗೊತ್ತಿದೆ. ರಾಜರಾಜೇಶ್ವರಿನಗರ, ನಂದಿನಿ ಲೇಔಟ್ ಹಾಗೂ ಯಶವಂತಪುರ ಪೊಲೀಸ್ ಠಾಣೆಗಳು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಈಗಾಗಲೇ ಪೊಲೀಸರ ಮೇಲೂ ದಬ್ಬಾಳಿಕೆ, ಆವಾಜ್ ಹಾಕಲಾಗುತ್ತಿದೆ. ವರ್ಗಾವಣೆ ಮಾಡಿಸುವುದು, ಆವಾಜ್ ಹಾಕುವುದು ಮಾಡುತ್ತಲೇ ಬರುತ್ತಿದ್ದಾರೆ ಎಂದು ಸಂಸದೆ ಕಿಡಿಕಾರಿದರು.
ಅಕ್ರಮ ಮಾಡುತ್ತಿರುವುದು ಡಿ.ಕೆ. ಬ್ರದರ್ಸ್, ನಮ್ಮ ಅಭ್ಯರ್ಥಿಯಲ್ಲ. ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ಮಾಡುವುದು, ಒತ್ತಡ ಹಾಕುವುದನ್ನು ಮಾಡಬಾರದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಕ್ಷೇತ್ರಕ್ಕೆ ಕಾಲಿಡಬಾರದು ಎಂಬುದು ನಮ್ಮ ಅಗ್ರಹ. ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅಕ್ರಮ ಮಾಡುವುದರಲ್ಲಿ ನಿಸ್ಸೀಮರು. ಹೀಗಾಗಿ ಅವರು ಕ್ಷೇತ್ರಕ್ಕೆ ಬರಬಾರದು ಎಂದು ಶೋಭಾ ಒತ್ತಾಯಿಸಿದರು.
ವಿಡಿಯೋ ಮತ್ತು ಅಡಿಯೋ ನಮ್ಮ ಬಳಿ ಇದ್ದು, ಅದನ್ನು ಅಯೋಗಕ್ಕೆ ಕೊಟ್ಟಿದ್ದೇವೆ. ಡಿಕೆ ಬ್ರದರ್ಸ್ ಅಕ್ರಮ ಮಾಡುತ್ತಾರೆ ಎಂದು ಖುದ್ದು ಅವರ ಪಕ್ಷದ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿಗೆ ಆದ್ಯತೆ ಕೊಡಬೇಕೆ ವಿನಃ ಭಾವನೆಗಳಿಗೆ ಅಲ್ಲ. ಅವರವರ ಮನೆಗಳಲ್ಲಿ ಏನೋ ಘಟನೆಗಳು ನಡೆದಿರುತ್ತವೆ. ಅವುಗಳನ್ನು ಭಾವನಾತ್ಮಕವಾಗಿ ಬಳಸಿಕೊಂಡು ಮತ ಕೇಳೋದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿ ಜನರು ಮತ ನೀಡಬೇಕು ಎಂದು ಅಭ್ಯರ್ಥಿಗಳ ಕಣ್ಣೀರು ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.