ಬೆಂಗಳೂರು: ಬಾರ್, ಪಬ್, ರೆಸ್ಟೋರೆಂಟ್ ತೆರೆಯಲು 50% ಆಸನ ಸಾಮರ್ಥ್ಯದೊಂದಿಗೆ ಅವಕಾಶ ನೀಡಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.
ಇಂದಿನಿಂದ ಅನ್‌ಲಾಕ್ 4 ಜಾರಿಗೆ ಬರಲಿದ್ದು, ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಈ ಸಂಬಂಧ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ ತೆರೆಯಲು 50% ಆಸನ ಸಾಮರ್ಥ್ಯದೊಂದಿಗೆ ಅವಕಾಶ ನೀಡಲಾಗಿದೆ. ಆಹಾರದೊಂದಿಗೆ ಬಿಯರ್, ಮದ್ಯ, ವೈನ್ ಸೇವಿಸಲು ಅನುಮತಿ ನೀಡಲಾಗಿದೆ.
ಈ ಹಿಂದಿನ ಆದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕಾರಣದಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ, ಬಿಯರ್, ವೈನ್ ದಾಸ್ತಾನುಗಳನ್ನು ಸೀಲ್ ಬಾಟಲುಗಳಲ್ಲಿ ನಿಗದಿಪಡಿಸಿರುವ ಎಂ.ಆರ್.ಪಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಅಸ್ಸಾಂ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳು ಮದ್ಯದೊಂದಿಗೆ ಆಹಾರ ಸೇವಿಸಲು ಈಗಾಗಲೇ ಅನುಮತಿ ನೀಡಿವೆ.
ಹೀಗಾಗಿ ಇತರೆ ರಾಜ್ಯಗಳಲ್ಲಿ ಮದ್ಯದೊಂದಿಗೆ ಆಹಾರ ಸೇವಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜಸ್ವ ಸಂಗ್ರಹದ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಮಾರ್ಗಸೂಚಿ ಪಾಲಿಸುವ ಮೂಲಕ ಅವಕಾಶ ನೀಡಿದೆ.