ಬೆಂಗಳೂರು : ನೈಸ್ ಸಂಸ್ಥೆ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಪ್ರತಿವಾದಿ ಸಾಕ್ಷ್ಯ ವಿಚಾರಣೆಗೆ ಅವಕಾಶ ನೀಡದೇ ವಿಚಾರಣಾ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿದೆ ಎಂದು ಆಕ್ಷೇಪಿಸಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನೈಸ್ ಸಂಸ್ಥೆ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲಿ ದೇವೇಗೌಡರಿಗೆ ಹಿನ್ನಡೆಯಾಗಿದೆ.
ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಹೆಚ್ ಡಿ ದೇವೇಗೌಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಅಲ್ಲದೇ, ಪ್ರಕರಣದ ವಿಚಾರಣೆಯನ್ನು ಮುಂದಿನ 9 ತಿಂಗಳೊಳಗೆ ಪೂರ್ಣಗೊಳಿಸುವಂತೆ ಹೈಕೋರ್ಟ್, ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ : 2012ರಲ್ಲಿ ನೈಸ್ ಸಂಸ್ಥೆ ವಿರುದ್ಧ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಲವು ಆರೋಪಗಳನ್ನು ಮಾಡಿದ್ದರು. ಹೆಚ್‌ಡಿಡಿ ವಿರುದ್ಧ ನೈಸ್ ಸಂಸ್ಥೆ ಮಾನನಷ್ಟ ಮೊಕ್ಕದ್ದಮೆ ದಾಖಲಿಸಿತ್ತು. ₹10 ಕೋಟಿ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ನ್ಯಾಯಾಲಯ, ಆರೋಪಗಳನ್ನು ಸಾಬೀತು ಮಾಡುವಂತೆ ಹೆಚ್ ಡಿ ದೇವೇಗೌಡರಿಗೆ ಅವಕಾಶ ನೀಡಿತ್ತು.
ಈ ಅವಧಿಯಲ್ಲಿ ದೇವೇಗೌಡರು ಸಾಕ್ಷ್ಯಗಳನ್ನು ಒದಗಿಸಬೇಕಿತ್ತು ಹಾಗೂ ಪ್ರತಿವಾದಿ ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಬೇಕಿತ್ತು. ಆದರೆ, ನ್ಯಾಯಾಲಯ ಹಲವು ಅವಕಾಶ ನೀಡಿದ್ದರೂ ಸಾಕ್ಷ್ಯ ವಿಚಾರಣೆ ನಡೆಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸಾಕ್ಷ್ಯ ವಿಚಾರಣೆಯನ್ನು ಮುಕ್ತಾಯಗೊಳಿಸಿತ್ತು. ಆ ಬಳಿಕ, ಹೆಚ್‌ಡಿಡಿ ಸಾಕ್ಷ್ಯ ವಿಚಾರಣೆಗೆ ಅವಕಾಶ ನೀಡಿಲ್ಲವೆಂದು ಆಕ್ಷೇಪಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಮೋದಿ, ಅಮಿತ್ ಶಾ ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರೆ: ಸಿದ್ದರಾಮಯ್ಯ