ಬೆಂಗಳೂರು: ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ಪ್ರವಾಹದ ಬಗ್ಗೆ ಮಾಜಿ ಸಚಿವರಿಬ್ಬರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರು ಬೆಳೆದ ಬೆಳೆ ನಷ್ಟವಾಗಿದೆ. ಈ ಸಂದರ್ಭ ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸುವುದರಿಂದ ಜನರ ಸಮಸ್ಯೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಮಾಜಿ ಸಚಿವ ಮತ್ತು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್ ಆರ್ ಪಾಟೀಲ್ ಟ್ವೀಟ್ ಮೂಲಕ ಆತಂಕ ಹೊರಹಾಕಿದ್ದಾರೆ.
ಎಸ್ಆರ್ ಪಾಟೀಲ್ ತಮ್ಮ ಟ್ವೀಟ್ನಲ್ಲಿ, ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ, ಉತ್ತರ ಕರ್ನಾಟಕ ಭಾಗದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಈರುಳ್ಳಿ ಸರಬರಾಜು ಸ್ಥಗಿತವಾಗಿದ್ದು, ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಸಣ್ಣ ಈರುಳ್ಳಿ ಬೆಲೆ ಕೆಜಿಗೆ 60 ರೂ. ಇದ್ದರೆ, ದೊಡ್ಡ ಈರುಳ್ಳಿಯ ದರ 85 ರೂ.ವರೆಗೆ ಏರಿಕೆಯಾಗಿದೆ. ಇನ್ನೆರಡು ದಿನಗಳಲ್ಲಿ ಇದು 100 ರೂ. ಗಡಿ ದಾಟುವ ಸಾಧ್ಯತೆಯಿದೆ.
ತಮಿಳುನಾಡಿನಲ್ಲಿ ಈರುಳ್ಳಿ ಬೆಳೆಗಾರರಿಗೆ ಅಲ್ಲಿನ ಸರ್ಕಾರ ಬೆಂಬಲ ಬೆಲೆ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಸಂಕಷ್ಟದಲ್ಲಿರುವ ರೈತರ ಬೆಂಬಲಕ್ಕೆ ನಿಲ್ಲುವ ಕೆಲಸವನ್ನು ಮಾಡುತ್ತಿಲ್ಲ. ತಮ್ಮದು ರೈತ ಪರ ಸರ್ಕಾರ ಅಂತಾ ಹೇಳುವ ಬಿಜೆಪಿ ಸರ್ಕಾರ ಇನ್ನಾದರೂ ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರಿಗೆ ಪರಿಹಾರ ನೀಡುವ ಕೆಲಸವನ್ನು ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಟ್ವೀಟ್ನಲ್ಲಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ, ನಿಮ್ಮ ಪ್ರವಾಹ ಪ್ರವಾಸೋದ್ಯಮ ತಡವಾಯಿತು. ಈ ದೃಶ್ಯ ನೋಡಿ. ವೈಮಾನಿಕ ಸಮೀಕ್ಷೆಯ ಮೂಲಕ ನಮ್ಮ ನೋವನ್ನು ನೀವು ನೋಡಲು ಸಾಧ್ಯವಾಗುವುದಿಲ್ಲ. ಈಗ ಭೀಮ ಮತ್ತು ಕಾಗಿನ ನೀರು ಕಡಿಮೆಯಾಗಿದ್ದು, ಈಗ ಜನರ ಅಪೇಕ್ಷೆ, ಪರಿಹಾರ ಮಾತ್ರ. ದಯಮಾಡಿ ನಮಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಿ, ನಮ್ಮ ನೋವಿಗೆ ಸ್ಪಂದಿಸಿ ಎಂದು ಮನವಿ ಮಾಡಿದ್ದಾರೆ.