ಬೆಂಗಳೂರು : ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷದ ನೂತನ ಸರ್ಕಾರ ಘೋಷಿಸಿರುವ ಮಾಜಿ ಶಾಸಕರಿಗೆ ಒಂದೇ ಅವಧಿಯ ಪಿಂಚಣಿ ವಿಷಯ ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದೆ. ರಾಜ್ಯದಲ್ಲಿಯೂ ಈ ಕುರಿತ ಚರ್ಚೆಗಳು ಆರಂಭಗೊಂಡಿವೆ. ಸದ್ಯ ರಾಜ್ಯದ ಮಾಜಿ ಶಾಸಕರು, ಸಂಸದರು ಪಡೆಯುತ್ತಿರುವ ಪಿಂಚಣಿ ಮತ್ತು ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ಇಲ್ಲಿದೆ.
ಫೆಬ್ರವರಿಯಲ್ಲಿ ನಡೆದಿದ್ದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ(ತಿದ್ದುಪಡಿ) ಮಸೂದೆ 2022ಕ್ಕೆ ಅಂಗೀಕಾರ ಪಡೆದುಕೊಳ್ಳುವ ಜೊತೆಗೆ ಕರ್ನಾಟಕ ಶಾಸಕರ ವೇತನ, ಪಿಂಚಣಿ ಮತ್ತು ಭತ್ಯೆ(ತಿದ್ದುಪಡಿ) ಮಸೂದೆ 2022ಕ್ಕೂ ಅಂಗೀಕಾರ ಸಿಕ್ಕಿದೆ. ಇದರಿಂದಾಗಿ ಸಚಿವರು, ಶಾಸಕರ ವೇತನದಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ. ಮಾಜಿ ಶಾಸಕರು, ಮಾಜಿ ಎಂಎಲ್ಸಿಗಳ ಪಿಂಚಣಿಯಲ್ಲೂ ಹೆಚ್ಚಳವಾಗಲಿದೆ.
ಮಾಜಿ ಶಾಸಕರ ಪಿಂಚಣಿ ಮತ್ತು ಸೌಲಭ್ಯ:
• 40 ಸಾವಿರ ಪಿಂಚಣಿ, ಹೆಚ್ಚುವರಿ ಅವಧಿಗೆ ತಲಾ 1 ಸಾವಿರ ರೂ.ಗಳ ಪಿಂಚಣಿ
• ಮಾಸಿಕ ನಾಲ್ಕು ಸಾವಿರ ರೂ. ವೈದ್ಯಕೀಯ ಭತ್ಯೆ
• ಮಾಜಿ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರ ವೈದ್ಯಕೀಯ ಬಿಲ್‌ಗಳನ್ನು ಮರು ವಾಪತಿಸುವ ಸೌಲಭ್ಯ
• ಪ್ರಯಾಣ ಭತ್ಯೆಯಾಗಿ ವಾರ್ಷಿಕ ಎರಡು ಕಂತುಗಳಲ್ಲಿ ಒಂದು ಲಕ್ಷ ರೂ.
• ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಹಾಯಕನ ಜತೆ ಉಚಿತ ಪ್ರಯಾಣಕ್ಕೆ ಅವಕಾಶ
ಕುಟುಂಬ ನಿವೃತ್ತಿ ವೇತನ : ಮಾಜಿ ಶಾಸಕರ ಕುಟುಂಬಕ್ಕೆ ಶೇ.50ರಷ್ಟು ಪಿಂಚಣಿ ಸೌಲಭ್ಯ ಸಿಗಲಿದೆ. ಅಂದರೆ ಮಾಜಿ ಶಾಸಕರು ನಿಧನರಾದಾಗ ಅವರು ಪಡೆಯುತ್ತಿದ್ದ ಪಿಂಚಣಿಯಲ್ಲಿ ಶೇ.50ರಷ್ಟನ್ನು ಅವರ ಅವಲಂಬಿತರಿಗೆ ನೀಡಲಾಗುತ್ತದೆ. ಮಾಸಿಕ 2 ಸಾವಿರ ರೂ. ವೈದ್ಯಕೀಯ ಭತ್ಯೆ ನೀಡಲಾಗುತ್ತದೆ ಹಾಗೂ ವೈದ್ಯಕೀಯ ಬಿಲ್‌ಗಳನ್ನು ಮರು ಪಾವತಿಸಲಾಗುತ್ತದೆ.
ಮಾಜಿ ಸಂಸದರ ಪಿಂಚಣಿ ಮತ್ತು ಸೌಲಭ್ಯ :
• 25 ಸಾವಿರ ಪಿಂಚಣಿ ಹೆಚ್ಚಿವರಿ ಅವಧಿಗೆ ತಲಾ 2 ಸಾವಿರ ರೂ. ಗಳ ಪಿಂಚಣಿ
• ರೈಲ್ವೆ ಉಚಿತ ಪ್ರಯಾಣ, ಹವಾನಿಯಂತ್ರಿತ ಮೊದಲ ದರ್ಜೆ ಸೇರಿ ಎಲ್ಲ ಆಸನದಲ್ಲಿ ಅವಕಾಶ
• ಅಂಡಮಾನ್ ನಿಕೋಬಾರ್, ಲಕ್ಷದ್ವೀಪಗಳಿಗೆ ಪ್ರಯಾಣಿಸಲು ಪ್ರಯಾಣಿಕ ಹಡಗುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
• ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಅನ್ವಯವಾಗಲಿದೆ.
ಕುಟುಂಬ ನಿವೃತ್ತಿ ವೇತನ : ಮಾಜಿ ಸಂಸದರ ಕುಟುಂಬಕ್ಕೆ ಶೇ.50ರಷ್ಟು ಪಿಂಚಣಿ ಸೌಲಭ್ಯ ಸಿಗಲಿದೆ. ಅಂದರೆ ಮಾಜಿ ಸಂಸದರು ನಿಧನರಾದಲ್ಲಿ ಅವರ ಅವಲಂಬಿತರಿಗೆ ಮಾಜಿ ಸಂಸದರು ಪಡೆಯುತ್ತಿದ್ದ ಪಿಂಚಣಿಯಲ್ಲಿ ಶೇ.50ರಷ್ಟನ್ನು ನೀಡಲಾಗುತ್ತದೆ ಹಾಗೂ ವೈದ್ಯಕೀಯ ಬಿಲ್‌ಗಳನ್ನು ಮರು ಪಾವತಿಸಲಾಗುತ್ತದೆ.
ಪಿಂಚಣಿ ಕಾಯ್ದೆಗೆ ತಿದ್ದುಪಡಿ : ಈವರೆಗೂ ಒಂದು ಬಾರಿ ಶಾಸಕರಾದವರಿಗೆ ಮಾಸಿಕ 25 ಸಾವಿರ ರೂ. ಪಿಂಚಣಿ ಸಿಗುತ್ತಿತ್ತು. ಎರಡು ಬಾರಿ ಶಾಸಕರಾದವರಿಗೆ ಮಾಸಿಕ 30 ಸಾವಿರ ರೂ., ಮೂರು ಬಾರಿ ಶಾಸಕರಾದವರಿಗೆ ಮಾಸಿಕ 35 ಸಾವಿರ ರೂ. ಪಿಂಚಣಿ ಸಿಗುತ್ತಿತ್ತು. ಮೂರಕ್ಕಿಂತ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದರೂ ಪಿಂಚಣಿ ಸಿಗುವುದು ಗರಿಷ್ಠ 35 ಸಾವಿರ ರೂ. ಸಿಗುತ್ತಿತ್ತು. ಆದರೆ, ಏಪ್ರಿಲ್ ಒಂದರಿಂದ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ಬರುತ್ತಿದೆ. ಅದರ ಪ್ರಕಾರ 40 ಸಾವಿರ ಪಿಂಚಣಿ, ಹೆಚ್ಚುವರಿ ಅವಧಿಗೆ ತಲಾ 1 ಸಾವಿರ ರೂ.ಗಳ ಪಿಂಚಣಿ ಸೇರ್ಪಡೆಯಾಗಿ ನೀಡಲಿದೆ. ಉಳಿದ ಸವಲತ್ತುಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಹಾಗಾಗಿ, ಸದ್ಯ ಕರ್ನಾಟಕದಲ್ಲಿ ಮಾಜಿ ಸಂಸದರಿಗಿಂತ ಮಾಜಿ ಶಾಸಕರ ಪಿಂಚಣಿ ಮೊತ್ತ ಹೆಚ್ಚಿನದಾಗಿರಲಿದೆ.
ಮಾಜಿಗಳಿಗೆ ಪಿಂಚಣಿ ಅಗತ್ಯ : ಮಾಜಿ ಶಾಸಕರು ಮತ್ತು ಸಂಸದರಿಗೆ ಪಿಂಚಣಿ ಅಗತ್ಯವಿದೆ ಎಂದು ಹೆಸರು ಹೇಳಲು ಇಚ್ಚಿಸದ ಮಾಜಿ ಶಾಸಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿ ಮಾಜಿಯಾದ ಮಾತ್ರಕ್ಕೆ ಅವರೆಲ್ಲಾ ಸಾರ್ವಜನಿಕ ಜೀವನದಿಂದ ದೂರವಿರಲು ಸಾಧ್ಯವಿಲ್ಲ. ಜನರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸಬೇಕಿದೆ. ಜನರ ಅಹವಾಲು ಆಲಿಸಬೇಕು, ಅವರಿಗೆ ಆತಿಥ್ಯ ನೀಡಬೇಕು, ಕೆಲಸ ಕಾರ್ಯಗಳನ್ನು ಮಾಡಿಸಿಕೊಡಬೇಕು. ಇದರ ನಿರ್ವಹಣೆಗೆ ಹಣದ ಅಗತ್ಯವಿದೆ. ಖರ್ಚುವೆಚ್ಚಗಳಿಗೆ ಪಿಂಚಣಿ ಹಣ ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: EGO ಬಿಟ್ಟು ಎಕ್ಸಾಂಗೆ ಹಾಜರಾಗಿ.. ಗೈರಾದವ್ರಿಗೆ ಒಂದು ತಿಂಗಳ ಬಳಿಕ ಮರು ಪರೀಕ್ಷೆ.. ಶಿಕ್ಷಣ ಸಚಿವ ಬಿ.ಸಿ ನಾಗೇಶ್