ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಕಾರಣಕ್ಕೆ ಶಾಲೆಗೆ ಬೀಗ ಹಾಕಲಾಗಿತ್ತು. ಇದೀಗ ಮೊದಲ ಹಂತವಾಗಿ 9, 10, 11 ಮತ್ತು 12ನೇ ತರಗತಿಗಳು ಇಂದಿನಿಂದ ಶುರುವಾಗುತ್ತಿದೆ. ಶಾಲೆಗೆ ಮರಳಿ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಭಾಶಯ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಇಂದಿನಿಂದ ಶಾಲೆಗೆ ಬರಲು ಉತ್ಸುಕರಾಗಿರುವ ಮಕ್ಕಳಿಗೆಲ್ಲ ಶುಭಾಶಯಗಳು. ಧೈರ್ಯದಿಂದ ಬನ್ನಿ, ಆನಂದದಿಂದ ಕಲಿಯಿರಿ, ಗೆಳೆಯರೊಂದಿಗೆ ಲವಲವಿಕೆಯಿಂದಿರಿ. ನಿಮ್ಮ ಶಾಲೆ, ಶಿಕ್ಷಕರು ನಿಮಗಾಗಿ ಎದುರು ನೋಡುತ್ತಿದ್ದಾರೆ ಅಂತ ತಿಳಿಸಿದ್ದಾರೆ.
ದೀರ್ಘ ಅವಧಿಯ ಬಳಿಕ ಇಂದಿನಿಂದ ರಾಜ್ಯದ ಶಾಲೆಗಳಲ್ಲಿ ಮತ್ತೊಮ್ಮೆ ಮಕ್ಕಳ ಕಲರವ ಆರಂಭವಾಗುತ್ತಿರುವುದು ತುಂಬಾ ಸಂತಸ ತಂದಿದೆ. ಮಕ್ಕಳ ಬಾಲ್ಯ ಕಳೆದು ಹೋಗದಂತೆ ಕಾಯುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಇಂದು ತೆಗೆದುಕೊಂಡಿರುವ ನಿಲುವು ಸ್ವಾಗತಾರ್ಹ. ಇದಕ್ಕಾಗಿ ನಾನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಕಳೆದ ಒಂದೂವರೆ ವರ್ಷದಲ್ಲಿ ನಾವು ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎನ್ನುವ ಸದಾಶಯದೊಂದಿಗೆ ಹಲವು ವಿಶಿಷ್ಟ ಬೋಧನಾ ಕ್ರಮಗಳಿಗೆ ಮುಂದಾಗಿದ್ದೆವು. ಜನವರಿಯಲ್ಲಿ ಶಾಲಾರಂಭದ ಪ್ರಯತ್ನ ಕೂಡಾ ಮಾಡಿ, ವಿದ್ಯಾಗಮದಂತಹ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಸಂವೇದಾ, ಆಡುತ್ತ ಕಲಿಯೋಣದಂತಹ ಹಲವು ಪರ್ಯಾಯ ಕಲಿಕಾ ಕಾರ್ಯಕ್ರಮಗಳಿಗೆ ಸಹ ಚಾಲನೆ ಕೊಟ್ಟಿದ್ದೆವು ಎಂದು ತಿಳಿಸಿದ್ದಾರೆ.
ವಿದ್ಯಾಗಮದ ಸಂದರ್ಭದಲ್ಲಿ, ಕಳೆದ ಬಾರಿ ಶಾಲೆಗಳನ್ನು ಪ್ರಾರಂಭಿಸಿದಾಗ ನಾನು ಅಸಂಖ್ಯ ಮಕ್ಕಳನ್ನು, ಪೋಷಕರನ್ನು ಖುದ್ದಾಗಿ ಭೇಟಿ ಮಾಡಿ ಅವರ ಸಂತಸವನ್ನು ಅರಿತಿದ್ದೆ. ಕಳೆದ ತಿಂಗಳು, ಈ ಆಗಸ್ಟ್ 3ನೆಯ ವಾರದಿಂದ ಶಾಲೆಗಳನ್ನು ಪ್ರಾರಂಭಿಸುವ ಇಂಗಿತ ವ್ಯಕ್ತಪಡಿಸಿದ್ದೆವು. ತರಗತಿ ಕಲಿಕೆಗೆ ಬೇರಾವುದೇ ಪರ್ಯಾಯ ಇಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ, ಸಮಾಜದ ಹಿತಕ್ಕೆ ಶಾಲಾ ಕಲಿಕೆಯಷ್ಟೇ ಪೂರಕ ಎನ್ನುವುದು ನನಗೆ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರ ತೆಗೆದುಕೊಂಡ ನಿಲುವು ಪೂರಕವಾಗಿದೆ. ಶಾಲೆಯೆಂಬ ದೇವಸ್ಥಾನ ನಮ್ಮ ಸಮಾಜಕ್ಕೆ ಒಳಿತು ಮಾಡಲಿ, ನಮ್ಮ ಮಕ್ಕಳ ಬಾಲ್ಯ ತನ್ನೆಲ್ಲ ಸಂಭ್ರಮದೊಂದಿಗೆ ಮರುಕಳಿಸಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭ: 9-12 ತರಗತಿಗಳಿಗೆ ಭೌತಿಕ ತರಗತಿ