ಬೆಂಗಳೂರು: ಅಹವಾಲು ಸಲ್ಲಿಸಲು ಬಂದಿದ್ದ ಮಹಿಳೆಯನ್ನು ಅವಮಾನಿಸಿರುವ ಸಚಿವ ಮಾಧುಸ್ವಾಮಿ ಕ್ಷಮೆಯಾಚಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣ ಸಚಿವರು, ಆ ರೈತ ಮಹಿಳೆಯ ಕ್ಷಮೆ ಯಾಚಿಸುವಂತೆ ಮಾಡಿ, ಅವರನ್ನು ಸಂಪುಟದಿಂದ ಕೈ ಬಿಟ್ಟು ಸರ್ಕಾರದ ಮಾನ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೋಲಾರ ತಾಲೂಕಿನ ಎಸ್ ಅಗ್ರಹಾರ ಕೆರೆ ವೀಕ್ಷಣೆ ವೇಳೆ ಈ ಘಟನೆ ನಡೆದಿದ್ದು, ರೈತ ಮಹಿಳೆಗೆ ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಇಂದು ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತಿದ್ದಾರೆ.