ಬೆಂಗಳೂರು : ಪಂಚ ರಾಜ್ಯಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗಿದೆ. ಕೇಂದ್ರ ಸರ್ಕಾರ ಅಂತಿಮವಾಗಿ ರೈತರ ಹೋರಾಟಕ್ಕೆ ಮಣಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆ ಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಏಕಾಏಕಿ ತೆಗೆದುಕೊಂಡಿರುವ ನಿರ್ಧಾರದಲ್ಲಿ ವಿಶ್ವಾಸದ ಕೊರತೆಯಿದೆ. ಚುನಾವಣೆಗಳ ಲಾಭ, ನಷ್ಟ ಇಟ್ಟುಕೊಂಡು ಕೇಂದ್ರ ತೀರ್ಮಾನ ಮಾಡಿದೆ. ಆದರೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ರೈತರು ಹೇಳಿದ್ದಾರೆ ಎಂದು ದೂರಿದರು.
ಕಳೆದೊಂದು ವರ್ಷದಿಂದ ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ವಿರೋಧಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಯವರು ಘೋಷಣೆ ಹೊರಡಿಸುವ ಮೂಲಕ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ. ರೈತ ಮುಖಂಡರನ್ನು ಮಾತುಕತೆಗೆ ಕರೆಯದೆ, ತಜ್ಞರ ಬಳಿ ಚರ್ಚಿಸದೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ರೈತರಲ್ಲಿ ಅನುಮಾನ ಮೂಡಿದೆ.
ಒಂದು ವರ್ಷದಲ್ಲಿ ನಡೆದ ರೈತ ಹೋರಾಟದ ಬಗ್ಗೆ ರಾಜಕೀಯ ನಾಯಕರು ಹಗುರವಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ನಡವಳಿಕೆ ಬಗ್ಗೆ ಟೀಕೆಗಳು ಪ್ರಾರಂಭವಾಗಿವೆ. ಪಂಚ ರಾಜ್ಯಗಳ ಚುನಾವಣೆ ಕೈತಪ್ಪಿ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಕೃಷಿ ಕಾಯ್ದೆಗಳನ್ನು ಹಿಂದೆ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಯ್ದೆಗಳ ವಿರುದ್ಧ ಉತ್ತರ ಪ್ರದೇಶ, ಪಂಜಾಬಿನಲ್ಲಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆದವು. ಆಗ ಮೋದಿಯವರು ಮನವೊಲಿಕೆ ಸಭೆ ಮಾಡಬೇಕಿತ್ತು. ಮನವೊಲಿಕೆ ಮಾಡಿದ್ದರೆ ಅನಾಹುತಗಳು ಆಗ್ತಿರಲಿಲ್ಲ. ಕೇಂದ್ರ ಸಚಿವರ ಪುತ್ರ ಕಾರು ಹರಿಸಿ ಅನಾಹುತ ಉಂಟು ಮಾಡಿದ್ದರು. ಪ್ರತಿಭಟನೆ ನಡೆದಾಗಲೇ ಸರ್ಕಾರ ಗೌರವಯುತವಾಗಿ ಸ್ಪಂದಿಸಬೇಕಿತ್ತು. ಸರ್ಕಾರಕ್ಕೆ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಟೀಕಿಸಿದರು.
ಶಂಖ ಊದಿದರೆ ಸ್ವರಾಜ್ ಸಿಗುತ್ತಾ? :
ಬಿಜೆಪಿಯವರು ಎಂಥದ್ದೋ ಶಂಖ ಊದೋಕೆ ಹೋಗಿದ್ದಾರೆ. ಶಂಖ ಊದಿದ್ರೆ ಸ್ವರಾಜ್ ಸಿಗುತ್ತಾ?, ಎಂಥದ್ದೋ ಯಾತ್ರೆ ಮಾಡೋಕೆ ಹೋಗಿದ್ದಾರೆ. ಇದರಿಂದ ರೈತರ ಸಮಸ್ಯೆ ಬಗೆಹರಿಯುತ್ತಾ ಎಂದು ಬಿಜೆಪಿ ಜನ ಸ್ವರಾಜ್ ಯಾತ್ರೆ (BJP Jana Swaraj Yatre) ವಿರುದ್ಧ ಹೆಚ್‌ಡಿಕೆ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಸರ್ಕಾರದ ಅಂದಾಜಿನ ಪ್ರಕಾರ 7 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಚಿಕ್ಕಮಗಳೂರು ಕಡೆ ಕಾಫಿ ತೋಟಗಳು ಹಾಳಾಗಿವೆ. ಬೆಂಗಳೂರಿನಲ್ಲೂ ರಸ್ತೆಗಳು ಹಾಳಾಗಿದ್ದು, ಹಲವಾರು ಸಮಸ್ಯೆಗಳು ಎದುರಾಗಿವೆ. ರಾಯಚೂರು ಜಿಲ್ಲೆಯಲ್ಲಿ ಭತ್ತ ಕೆಸರಿನಲ್ಲಿ ಮಚ್ಚಿವೆ. ಚಿತ್ರದುರ್ಗ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಎಲ್ಲಾ ಕಡೆ ಅನಾಹುತ ಆಗಿದೆ. ರಾಜ್ಯ ಸರ್ಕಾರದಿಂದ ತ್ವರಿತ ಕೆಲಸಗಳು ಆಗಬೇಕು. ಮಳೆಯಿಂದ ಜನರು ಸಾಯುತ್ತಿದ್ದಾರೆ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೋ ಸಂರಕ್ಷಣೆ ಮಾಡಲು ನಿರ್ಧಾರ ಮಾಡಿದ್ದರು. ಗೋ ಶಾಲೆ ತೆರೆಯಲು ಕೇವಲ 25 ಕೋಟಿ ರೂ. ಕೊಡುತ್ತೇವೆ ಎಂದಿದ್ದಾರೆ. ಇನ್ನು ಗೋ ಶಾಲೆಗಳಿಗೆ ಹಣ ನೀಡಿಲ್ಲ. ಬೆಳೆನಾಶದಿಂದ ಮೇವಿನ ಕೊರತೆ ಉಂಟಾಗಿದೆ. ಇದೆಲ್ಲದಕ್ಕೂ ಒಂದಕ್ಕೊಂದು ಚೈನ್ ಲಿಂಕ್ ಇದೆ. ಸ್ಥಳೀಯ ಮಟ್ಟದಲ್ಲಿ ಡಿಸಿಗಳು ಇಷ್ಟೊತ್ತಿಗೆ ಸಮೀಕ್ಷೆ ಮಾಡಬೇಕಿತ್ತು. ಕೇಂದ್ರದ ಮುಂದೆ ಅರ್ಜಿ ಇಡ್ಕೊಂಡು ಹೋದ್ರೆ ಆಗುತ್ತಾ?, ಎಸ್ಡಿಆರ್ಎಫ್ (SDRF)ನಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Farm Laws repealed: ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ: ಮೂರೂ ಕೃಷಿ ಕಾನೂನುಗಳು ರದ್ದು!