ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಯಾರೇ ರಾಜ್ಯದಿಂದ ಸ್ಪರ್ಧೆ ಮಾಡಿದರೂ ಸೋಲು ನಿಶ್ಚಿತ. ಕರ್ನಾಟಕದಲ್ಲಿ ಮೊದಲು ಸ್ಪರ್ಧೆ ಮಾಡಲಿ. ನಂತರ ಅವರ ವಿರುದ್ಧ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಯೋಚನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದರು. ಬಾಗಿಲಿನಲ್ಲೇ ನಿಂತು ಹೂಗುಚ್ಚ ನೀಡಿ ಯಡಿಯೂರಪ್ಪ ಅವರನ್ನು ಕೃಷ್ಣ ಬರಮಾಡಿಕೊಂಡರು. ನಂತರ ಉಭಯ ನಾಯಕರು ಕೆಲಕಾಲ ಮಂಡ್ಯ ರಾಜಕೀಯ, ಲೋಕಸಭಾ ಚುನಾವಣೆ ಸಿದ್ಧತೆ, ಚುನಾವಣಾ ಪ್ರಚಾರ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಎಸ್.ಎಂ.ಕೃಷ್ಣ ಅವರೊಂದಿಗೆ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಿದ್ದೇವೆ. ಮಂಡ್ಯ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿ ದಕ್ಷಿಣ ಕರ್ನಾಟಕದ ಏಳೆಂಟು ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಬರಲು ಅವರು ಒಪ್ಪಿದ್ದಾರೆ. ಇದರಿಂದ ನಮಗೆ ಆನೆ ಬಲ ಬಂದಂತಾಗಿದೆ. ದೇಶದಲ್ಲಿ ಇರುವಂತೆ ರಾಜ್ಯದಲ್ಲಿ ಮೋದಿ ಅಲೆ ಇದೆ. ಅದರ ಜೊತೆ ಕೃಷ್ಣ ಅವರು ಪ್ರಚಾರಕ್ಕೆ ಬಂದರೆ ಅದರ ಪರಿಣಾಮ ಬೇರೆಯದ್ದೇ ಆಗಲಿದೆ ಎಂದರು.
ಮಂಡ್ಯ ರಾಜಕೀಯ ಸಂಬಂಧ ಚರ್ಚೆ ನಡೆಸಿದ್ದೇವೆ. ಕೃಷ್ಣ ಅವರು ಅವರ ಸಲಹೆ ಕೊಟ್ಟಿದ್ದಾರೆ. ಸುಮಲತಾ ಅಂಬರೀಶ್ ಸ್ಪರ್ಧೆ ಬಗ್ಗೆಯೂ ಚರ್ಚಿಸಿದ್ದೇವೆ. ಸುಮಲತಾ ಅವರು ಮೊದಲು ತಮ್ಮ ನಿರ್ಧಾರ ಪ್ರಕಟಿಸಿದ ನಂತರ ನಾವು ಮತ್ತೊಮ್ಮೆ ಹಿರಿಯ ನಾಯಕರೆಲ್ಲಾ ಸೇರಿ ಚರ್ಚಿಸಿ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದರು.
ರಾಹುಲ್ ಗಾಂಧಿ ಸೇರಿದಂತೆ ಯಾರು ಬೇಕಾದರೂ ಕರ್ನಾಟಕದಲ್ಲಿ ಸ್ಪರ್ಧಿಸಬಹುದು. ರಾಷ್ಟ್ರಾದ್ಯಂತ ಮೋದಿ ಗಾಳಿ ಬೀಸುತ್ತಿದೆ. ಯಾರೇ ಸ್ಪರ್ಧೆ ಮಾಡಿದರೂ ಸೋಲುತ್ತಾರೆ. ನಿಶ್ಚಿಯವಾಗಿ ನಾವು 22 ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಪರ ವಾತಾವರಣ ಇದೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಮೊದಲು ಸ್ಪರ್ಧೆ ಮಾಡಲಿ. ನಂತರ ಅವರ ವಿರುದ್ಧ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಯೋಚನೆ ಮಾಡುತ್ತೇವೆ. ಎಸ್.ಎಂ.ಕೃಷ್ಣ ಅವರು ಸ್ಪರ್ಧೆ ಮಾಡಿದರೆ ಸಂತೋಷ ಎಂದರು.
ಕುಮಾರಸ್ವಾಮಿಯವರಿಗೆ ಅಧಿಕಾರದ ಮದ. ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೆ ಮಾತನಾಡಿ ಸಣ್ಣವರಾಗಿದ್ದಾರೆ. ಇದು ಅವರಿಗೆ ಶೋಭೆ ತರುವಂತದ್ದಲ್ಲ. ಮನಸ್ಸಿಗೆ ಬಂದಂತೆ ಎಸ್.ಎಂ.ಕೃಷ್ಣ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಸಾಕಷ್ಟು ಅಧಿಕಾರವನ್ನು ಅವರು ನೋಡಿ ಬಿಟ್ಟಿದ್ದಾರೆ. ಜನ ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಎಸ್.ಎಂ.ಕೃಷ್ಣ ಮಾತನಾಡಿ, ಬಿಜೆಪಿಯ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಯಡಿಯೂರಪ್ಪನವರಿಗೆ ಪೂರ್ಣ ಸಹಕಾರ ಕೊಡಲು ತೀರ್ಮಾನಿಸಿದ್ದೇನೆ. 22 ಸ್ಥಾನ ಗೆಲ್ಲುವ ಗುರಿಗೆ ನನ್ನ ಕೈಲಾದ ಸಹಕಾರ ನೀಡುತ್ತೇನೆ. ಎಲ್ಲೆಲ್ಲಿ ನನ್ನ ಅವಶ್ಯಕತೆ ಇದೆಯೋ ಅಲ್ಲಿ ಹೋಗಿ ಪ್ರಚಾರ ಮಾಡುತ್ತೇನೆ ಎಂದರು.
ವಂಶಪಾರಂಪರ್ಯ ಆಡಳಿತದ ಬಗ್ಗೆ ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಅವರು ಏನು ಹೇಳಬೇಕೋ ಹೇಳಿ ಆಗಿದೆ. ಉಳಿದಿದ್ದನ್ನು ಜನತೆಯ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದರು.
ಈಗ ರಾಹುಲ್ ಗಾಂಧಿ ವಿರುದ್ಧ ನಾನು ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ಯಡಿಯೂರಪ್ಪ ನಿರ್ಧರಿಸುತ್ತಾರೆ. ಆದರೆ, ನಾನು ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ. ಪ್ರಚಾರದ ಮೂಲಕ ಚುನಾವಣೆಯಲ್ಲಿ ಸಕ್ರಿಯವಾಗಿರುತ್ತೇನೆ. ಅದೂ ಕೂಡ ಒಂದು ರೀತಿ ಚುನಾವಣಾ ರಾಜಕೀಯವೇ ಎಂದು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿ 10 ಮತಗಳ ಅಗತ್ಯವಿತ್ತು. ಆಗ ನಾನು ದೇವೇಗೌಡರ ಸಹಕಾರ ಪಡೆದಿದ್ದು ನಿಜ. ಅದನ್ನು ಹಲವಾರು ವೇದಿಕೆಗಳಲ್ಲಿ ಬಹಿರಂಗವಾಗೇ ಹೇಳಿದ್ದೇನೆ. ಅದರಲ್ಲಿ ರಹಸ್ಯವೇನೂ ಇಲ್ಲ ಎಂದು ಪದೇ ಪದೆ ಸಹಕಾರ ಪಡೆದ ಟೀಕೆಗೆ ಟಾಂಗ್ ನೀಡಿದರು.