ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ಹೊರಹಾಕಿದ್ದು, ಕನ್ನಡಿಗರ ಮೇಲೆ ಮರಾಠಿಗರು ಕತ್ತಿ ಸವಾರಿ ಮಾಡಲು ಸರ್ಕಾರವೇ ಅವಕಾಶ ಕೊಟ್ಟ ಹಾಗಿದೆ ಎಂದು ಕಿಡಿಕಾರಿದ್ದಾರೆ. ಆದೇಶ ವಾಪಸ್ ಪಡೆಯದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮರಾಠಿಗರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡುವ ಮೂಲಕ ಇಡೀ ರಾಜ್ಯದಲ್ಲಿ ತಾರತಮ್ಯ ಮಾಡ್ತಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಕರಾಳ ದಿನಾಚರಣೆ ಮಾಡುವ ಮರಾಠಿಗರಿಗೆ ಪ್ರಾಧಿಕಾರ ಯಾಕೆ ಬೇಕು. ಇವತ್ತು ಮರಾಠಿಗರಿಗೆ ಪ್ರಾಧಿಕಾರ ರಚನೆ ಮಾಡ್ತಿರಾ, ನಾಳೆ ಮಾರ್ವಾಡಿಗಳಿಗೆ, ತಮಿಳರಿಗೆ ಅಥವಾ ತೆಲುಗಿನವರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ರೆ, ಕನ್ನಡಿಗರ ಪರಿಸ್ಥಿತಿ ಏನು..? ಕನ್ನಡಿಗರಲ್ಲಿ ಇವತ್ತು ಅಲೆಮಾರಿ ಜನಾಂಗದವರಿಗೆ ಮನೆ ಮಠ ಇಲ್ಲ. ನೆರೆ ಬಂದು ಅನೇಕ ಜಿಲ್ಲೆಗಳಲ್ಲಿ ತೊಂದರೆಯಾದ ಕನ್ನಡಿಗರನ್ನು ನೋಡ್ತಿಲ್ಲ. ಆದ್ದರಿಂದ ಈ ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದರು.
ಅಲ್ಲದೇ ಮಹಾರಾಷ್ಟ್ರದಲ್ಲಿ ನಮ್ಮ ಅನೇಕ ಕನ್ನಡಿಗರು ವಾಸ ಮಾಡುವ ಅನೇಕ ಜಿಲ್ಲೆಗಳಿವೆ. ಕೇರಳದಲ್ಲಿದೆ, ಗೋವಾದಲ್ಲಿದೆ. ಆದರೆ ನಮ್ಮ ಕನ್ನಡಿಗರಿಗೆ ಅನ್ಯಾಯ ಮಾಡಿ, ಅವರ ಮನೆಗಳನ್ನು ನಾಶ ಮಾಡ್ತಿದ್ದಾರೆ. ಅವರಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ. ಅವರ ಹಿತವನ್ನು ಎಷ್ಟರ ಮಟ್ಟಿಗೆ ಕಾದಿದ್ದೀರಾ, ಅವರ ಬಗ್ಗೆ ಏನೆಲ್ಲ ಕ್ರಮಗಳನ್ನು ವಹಿಸಿದ್ದೀರಾ ಎಂದು ಪ್ರಶ್ನಿಸಿದರು.
ಕೇವಲ ಮತಕ್ಕಾಗಿ, ರಾಜಕೀಯಕ್ಕಾಗಿ ಮರಾಠ ಪ್ರಾಧಿಕಾರ ರಚನೆ ಮಾಡ್ತೀರಾ ಅಂದರೆ ಇದನ್ನು ಯಾವತ್ತು ಸಹ ಕನ್ನಡಿಗರು ಒಪ್ಪುವುದಿಲ್ಲ. ಕೂಡಲೇ ಆದೇಶ ವಾಪಸ್ ಪಡೆಯಬೇಕು. ಇಲ್ಲ ಅಂದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.