ಬೆಂಗಳೂರು: ಉಕ್ರೇನ್ ದೇಶದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಯ ಮೃತದೇಹ ಸೆಪ್ಟೆಂಬರ್ 8 ರಂದು ಸ್ವಗ್ರಾಮಕ್ಕೆ ತಲುಪಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಉಕ್ರೇನ್ ದೇಶದ ಕಾರಕೀವ್ ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವರ್ಷದಿಂದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಅಮರ ಶಾಲಿವಾನ ಬಿರಾದಾರ (20) ವಾಸವಾಗಿದ್ದ ಹಾಸ್ಟೆಲ್ ನಲ್ಲಿ ಕೆಲ ದಿನಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ವಿಚಾರ ತಿಳಿದ ಕುಟುಂಬದ ಸದಸ್ಯರು ಮೃತದೇಹವನ್ನು ಸ್ವದೇಶಕ್ಕೆ ತರಲು ಪ್ರಯತ್ನಿಸಿದ್ದರು. ಈ ಕಾರ್ಯದಲ್ಲಿ ಸಹಕಾರ ನೀಡುವಂತೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಮನವಿ ಮಾಡಿದ್ದರು. ಈ ಕುರಿತು ವಿಶೇಷ ಗಮನ ಹರಿಸಿದ್ದ ಖಂಡ್ರೆ, ಮೃತದೇಹ ಸ್ವದೇಶಕ್ಕೆ ವಾಪಸ್ ಸಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದೀಗ ವಿದ್ಯಾರ್ಥಿಯ ಮೃತದೇಹ ವಾಪಸ್ ಬರುತ್ತಿದೆ ಎಂದು ಟ್ವೀಟ್ ಮೂಲಕ ತಿಳಿಸಿರುವ ಖಂಡ್ರೆ, ಶಾಲಿವಾನ ಬಿರಾದಾರ ಅನುಮಾನಾಸ್ಪದವಾಗಿ ಮೃತಪಟ್ಟಿರುವ ವಿಷಯ ತಿಳಿದು ತೀವ್ರ ದುಃಖವಾಯಿತು. ತಕ್ಷಣ ಅಲ್ಲಿನ ರಾಯಭಾರಿ ಕಚೇರಿ, ಅನಿವಾಸಿ ಭಾರತೀಯ ಸಮಿತಿ ಮಾಜಿ ಉಪಾಧ್ಯಕ್ಷ ಡಾ. ಆರತಿ ಕೃಷ್ಣ ಹಾಗೂ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ, ವಿದ್ಯಾರ್ಥಿ ಅಮರ ಮೃತದೇಹವನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಮ್ಮೆಲ್ಲರ ಪ್ರಯತ್ನದ ಫಲವಾಗಿ ಅಮರ ಮೃತದೇಹವು ಸೆ.8 ರಂದು ಸ್ವಗ್ರಾಮಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಸೆ. 7 ರಂದು ಉಕ್ರೇನ್ ನಿಂದ ಟರ್ಕೀಸ್ ವಿಮಾನದಲ್ಲಿ ಹೊರಟು ಮೃತದೇಹ ಬೆಂಗಳೂರು ತಲುಪಲಿದೆ. ಇಲ್ಲಿಂದ ಸೆ.8 ರಂದು ಹೈದರಾಬಾದ್ ತಲುಪಿ ಅದೇ ದಿನ ಮೃತದೇಹ ಬಾಲ್ಕಿಯ ಸ್ವಗ್ರಾಮ ತಲುಪಲಿದೆ ಎಂದು ಖಂಡ್ರೆ ಮಾಹಿತಿ ನೀಡಿದ್ದಾರೆ.