ಬೆಂಗಳೂರು: ಪಕ್ಷಾಂತರ ಮಾಡಿರೋರು ತಾಯಿಗೆ ದ್ರೋಹ ಮಾಡಿದಂತೆ. ಜನರು ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡ್ತಿದೆ. ಜನ ಇದರ ವಿರುದ್ಧ ತಿರುಗಿ ಬಿದ್ದಿದ್ದಾರೆ. 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪರ ಅಲೆ ಇದೆ. ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ಕೆ.ಆರ್.ಪುರಂನಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಗೆಲ್ಲುತ್ತೆ. ಯಾವ ಜೋಡೆತ್ತು ಬಂದ್ರು ಏನೂ ವ್ಯತ್ಯಾಸ ಆಗುವುದಿಲ್ಲ. ಸಿಎಂ ಬಂದರೂ ಏನೂ ವ್ಯತ್ಯಾಸ ಆಗುವುದಿಲ್ಲ. ಜನ ಪ್ರವಾಹದ ಮುಂದೆ ಎಲ್ಲಾ ಕೊಚ್ಚಿಕೊಂಡು ಹೋಗುತ್ತೆ ಎಂದರು.
ಯಡಿಯೂರಪ್ಪ ರಾಜಕೀಯ ಮಾಡ್ತಿದ್ದಾರೆ. ಕುರುಬರಿಗೆ 5 ಮಂತ್ರಿ ಸ್ಥಾನ ನೀಡ್ತೀನಿ ಎಂದು ಜಾತಿ ಮೇಲೆ ಮತ ಕೇಳ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ವಿರುದ್ಧವಾಗಿದೆ. ಕಾಂಗ್ರೆಸ್ ಎಲ್ಲಾ ಜಾತಿಯನ್ನು ಸಮಾನವಾಗಿ ನೋಡುತ್ತಿದೆ. ಜನ ಇದಕ್ಕೆ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.