ಬೆಂಗಳೂರು: ಸೂಕ್ಷ್ಮ ಪ್ರದೇಶವಾದ ಪಶ್ಚಿಮಘಟ್ಟ ಪ್ರದೇಶದಲ್ಲಿ 1400 ಚೆಕ್ ಡ್ಯಾಂ ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಇಟ್ಟಿರುವ ಸಣ್ಣನೀರಾವರಿ ಇಲಾಖೆಯ ಯೋಜನೆಗೆ ಪರಿಸರ ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಹಾಗೂ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಪಶ್ಚಿಮ ಘಟ್ಟದಲ್ಲಿ ಸಣ್ಣ-ಸಣ್ಣ ಡ್ಯಾಂ ನಿರ್ಮಾಣದ ಚಿಂತನೆ ಮಾಡಿದೆ.
ನದಿಗಳು ಸಮುದ್ರ ಸೇರುವ ಸ್ಥಳಗಳಲ್ಲಿ ತಡೆದು ಸಿಹಿ ನೀರು ಸಂಗ್ರಹಿಸಲು ಸಣ್ಣ ನೀರಾವರಿ ಇಲಾಖೆ ಈಗಾಗಲೇ ಸ್ಥಳಗಳನ್ನು ಗುರುತಿಸಿದೆ. 3.5 ಸಾವಿರ ಕೋಟಿ ಹಣ ಸಹಾಯಕ್ಕೆ ಕೇಂದ್ರ ಸರ್ಕಾರದ ಜಲಶಕ್ತಿ ಯೋಜನೆಯಡಿ ಮನವಿ ಮಾಡಲಾಗಿದೆ. ಆದರೆ ಪರಿಸರದ ವ್ಯವಸ್ಥೆಗೆ ವಿರುದ್ಧವಾಗಿ ಸಮುದ್ರಕ್ಕೆ ಹೋಗದಂತೆ ನೀರಿನ ಹರಿವನ್ನು ತಡೆದು ನಿಲ್ಲಿಸುವ ಕೆಲಸ ಪರಿಸರಕ್ಕೆ ತೀವ್ರ ಹಾನಿ ಮಾಡುವ ಬಗ್ಗೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿ ಸೂಕ್ಷ್ಮ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಾಣದಿಂದ ಭೂಕುಸಿತ ಹೆಚ್ಚಳವಾಗುವ ಸಾಧ್ಯತೆ ಕುರಿತು ಪರಿಸರ ತಜ್ಞರು ಎಚ್ಚರಿಸಿದ್ದಾರೆ.
ಈಗಾಗಲೇ ಪಶ್ಚಿಮ ಘಟ್ಟದಲ್ಲಿ ವಿವಿಧ ಯೋಜನೆ ಕೈಗೊಂಡು ಹಾನಿ ಮಾಡಲಾಗಿದೆ. ಮಿನಿ ಹೈಡೆಲ್ ಪ್ರಾಜೆಕ್ಟ್ ಕೂಡಾ ಹಲವು ವಿಧದಲ್ಲಿ ಸೂಕ್ಷ್ಮ ಪ್ರದೇಶಕ್ಕೆ ಅಡ್ಡಿಉಂಟುಮಾಡಿದೆ. ಮತ್ತೆ ಚೆಕ್ ಡ್ಯಾಂಗಳ ನಿರ್ಮಾಣ ಪಶ್ಚಿಮ ಘಟ್ಟಗಳಿಗೆ ಇನ್ನಷ್ಟು ಹಾನಿ ಮಾಡಲಿದೆ ಎಂದು ಪರಿಸರ ತಜ್ಞರಾದ ಪ್ರೊ. ಪರಮೇಶ್ ತಿಳಿಸಿದ್ದಾರೆ. ಕಾಡುಗಳು ಹಿಡಿದಿಟ್ಟಷ್ಟು ನೀರನ್ನು ಚೆಕ್ ಡ್ಯಾಂಗಳು ಹಿಡಿದಿಡಲು ಅಸಾಧ್ಯ ಎಂದಿದ್ದಾರೆ. ನದಿ ನೀರನ್ನು ಸಮುದ್ರ ಸೇರದಂತೆ ತಡೆದರೆ ಉಳಿದ ಪ್ರದೇಶಗಳು ಒಣಗಿ, ನದಿಪಾತ್ರದ ಜಲಚರ, ಜೀವಿಗಳು ನಾಶವಾಗಲಿವೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಈ ಡ್ಯಾಂಗಳ ನಿರ್ಮಾಣ ಮತ್ತಷ್ಟು ಅಪಾಯಕಾರಿಯಾಗಬಹುದಾಗಿದೆ. ಡ್ಯಾಂಗಳ ನಿರ್ಮಾಣಕ್ಕೆ ಅಡಿಪಾಯವೂ ಗಟ್ಟಿಯಾಗಿರಬೇಕಾಗಿದ್ದು, ಕಲ್ಲಿನ ಅಡಿಪಾಯ ಪಶ್ಚಿಮ ಘಟ್ಟದ ತಪ್ಪಲಲ್ಲಿ ಸಿಗುವುದು ಕಷ್ಟಸಾಧ್ಯವಾಗಿದೆ. ಒಂದು ಚೆಕ್ ಡ್ಯಾಂ ನಿರ್ಮಾಣ ಮಾಡಿದರೂ, ಅವುಗಳು ಬಾಳಿಕೆ ಬರುವುದು ಅನುಮಾನವಾಗಿದ್ದು, ಮಳೆಗಾಲದಲ್ಲಿ ನೀರಿನ ಜೊತೆ ನದಿ ಮೂಲಕ ಹರಿದು ಬರುವ ಮರಗಳು, ಇತರೆ ಗಟ್ಟಿ ವಸ್ತುಗಳು ಜಲಾಶಯವನ್ನೇ ಒಡೆದುಹಾಕುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಮುದ್ರ ಸೇರುವ ನದಿನೀರನ್ನು ತಡೆಯುವ ಬದಲು, ಕೃಷ್ಣಾ ಮೊದಲಾದ ನದಿಗಳಲ್ಲಿ ಉಂಟಾಗುವ ಪ್ರವಾಹದ ನೀರನ್ನು ಶೇಖರಿಸಿ ಕೆರೆ ತುಂಬಿಸುವ ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಸಣ್ಣನೀರಾವರಿ ಇಲಾಖೆ ಸಚಿವ ಜೆ ಸಿ ಮಾಧುಸ್ವಾಮಿ ಹೇಳುವ ಪ್ರಕಾರ, ಸಣ್ಣ ಡ್ಯಾಂಗಳು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಕೊಡಗು ಪ್ರದೇಶಗಳಲ್ಲಿ ನಿರ್ಮಾಣವಾಗಲಿದ್ದು, ಕಾಡಿನ ಜಾಗ ಯಾವುದೇ ಕಾರಣಕ್ಕೂ ಮುಳುಗಡೆಯಾಗುವುದಿಲ್ಲ ಎಂದಿದ್ದಾರೆ. ಅಲ್ಲದೆ ಸಣ್ಣ ಡ್ಯಾಂಗಳು ಕೇವಲ ಐದರಿಂದ- ಆರು ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದ್ದು, ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆ ಭಾಗದ ಜನರ ಕುಡಿಯುವ ನೀರಿನ ಬಳಕೆಗೆ ಹಾಗೂ 50-60 ಎಕರೆ ಜಾಗದ ಜನರಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾಗ್ತಿದೆ ಎಂದಿದ್ದಾರೆ.
'ಈಟಿವಿ ಭಾರತ' ಜೊತೆ ಮಾತನಾಡಿದ ಪ್ರೊ. ಪರಮೇಶ್ ಅವರು, ನೀರು ಉಳಿಸಲು, ಸರಿಯಾಗಿ ಬಳಕೆ ಮಾಡಲು ಬೆಟ್ಟದಲ್ಲಿ ಮರ ಗಿಡ ಬೆಳೆಸಬೇಕು. ಮರಗಳು ಬೆಳೆದ ಮೇಲೆ ಅವುಗಳ ಬೇರುಗಳು ನೀರನ್ನು ಹಿಡಿದಿಡುತ್ತವೆ. ನೀರನ್ನು ಇಂಗಿಸುತ್ತವೆ. ಆಮೇಲೆ ಅದು ಝರಿ ಆಗುತ್ತದೆ. ಭೂಮಿಯ ಒಳಗೆ ಇಂಗಿ ನೀರು ಜಿನುಗಬೇಕು. ಆಗ ಮಣ್ಣು ಬಾಯಿ ಬಿಡುವುದಿಲ್ಲ. ಕಲ್ಲು, ಬಂಡೆ ಕೆಳಗೆ ಸಿಕ್ಕ ಜಾಗಗಳಲ್ಲಿ ಕೂಡಲೇ ನೀರು ಆಚೆ ಬೀಳುತ್ತದೆ, ಝರಿಯಾಗುತ್ತದೆ. ಆಗ ಮಣ್ಣು ಕೊಚ್ಚಿಹೋಗುವುದಿಲ್ಲ. ಆದರೆ ಚೆಕ್ ಡ್ಯಾಂ ನಿರ್ಮಾಣ ಮಾಡುವುದರಿಂದ, ನೀರಿನ ಹರಿವು ತಡೆಯುವುದರಿಂದ ಸಾಕಷ್ಟು ಜಾತಿಯ ಪ್ರಾಣಿಗಳು ನಶಿಸುತ್ತವೆ. ಎಲ್ಲಾ ಕಡೆ ಕೆರೆ ಕಟ್ಟಲೂ ಸಾಧ್ಯವಾಗುವುದಿಲ್ಲ. ಅದಕ್ಕೆ ಮಣ್ಣಿನ ಪರೀಕ್ಷೆ ನಡೆಯಬೇಕಾಗುತ್ತದೆ ಎಂದು ವಿವರಿಸಿದರು.
1400 ಚೆಕ್ ಡ್ಯಾಂ ಕಟ್ಟುವುದರಿಂದ ಭೂಕುಸಿತ ಆಗುತ್ತದೆ. ಮನೆಗಳು ಕೊಚ್ಚಿ ಹೋಗುತ್ತವೆ. ಮೇಲ್ಮೈಯಿಂದ ಮಣ್ಣು ಕೊಚ್ಚಿಕೊಂಡು ಬಂದು ಡ್ಯಾಂಗಳಲ್ಲಿ ಹೂಳಾಗುತ್ತವೆ. ಹಾರಂಗಿ, ಕಬಿನಿಗಳಲ್ಲಿ, ತುಂಗಭದ್ರ, ಹೇಮಾವತಿ ಜಲಾಶಯಗಳಲ್ಲಿ ಈಗಾಗಲೇ ಹೂಳು ತುಂಬಿದೆ. ಕಾಲಕಾಲಕ್ಕೆ ಮಣ್ಣು ತೆಗೆಯಬೇಕಾಗುತ್ತದೆ. ಇವೆಲ್ಲ ಹೆಚ್ಚು ಖರ್ಚಾಗುವ ಯೋಜನೆಗಳು. ನೀರಿನ ಬಳಕೆಯನ್ನು ವೈಜ್ಞಾನಿಕವಾಗಿ ಬಳಕೆ ಮಾಡದೆ, ಡ್ಯಾಂಗಳನ್ನು ಕಟ್ಟುತ್ತಾ ಹೋದರೆ, ಮಿಸ್ ಮ್ಯಾನೇಜ್ಮೆಂಟ್ ಆಗಲಿದೆ ಎಂದು ತಿಳಿಸಿದರು.
ನೀರನ್ನು ಇಂಗಿಸಿ ನದಿಯಾಗಿ, ಝರಿಯಾಗಿ ಬರಬೇಕೇ ಹೊರತು, ಇಂಗಿಸಲು ಬಿಡದೆ ಡ್ಯಾಂ ಮಾಡುವುದು ಸರಿಯಲ್ಲ. ಇವೆಲ್ಲ ಕಾಂಟ್ರಾಕ್ಟರ್ ಸ್ಕೀಮ್ಗಳೇ ಹೊರತು ಬೇರೆ ರೀತಿ ಬಳಕೆಯಾಗುವುದಿಲ್ಲ. ಈಗಾಗಲೇ ಕೊಡಗಿನಲ್ಲಿ ಲ್ಯಾಂಡ್ ಸ್ಲೈಡ್ ಆಗುತ್ತಿದೆ. ಮತ್ತೆ ಡ್ಯಾಂ ನಿಂದ ಈ ಪರಿಸ್ಥಿತಿ ಬಿಗಡಾಯಿಸಲಿದೆ ಎಂದರು.