ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಹುದ್ದೆಯ ನೇಮಕಾತಿಯನ್ನು ಪ್ರವೇಶ ಪರೀಕ್ಷೆಯ ಮೂಲಕ ನಡೆಸಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ, ರಾಜ್ಯದ 411 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, 350 ಕಾಲೇಜಿನಲ್ಲಿ ಖಾಯಂ ಪ್ರಾಂಶುಪಾಲರ ಹುದ್ದೆ ಖಾಲಿ ಇದ್ದು, ಪ್ರಾಂಶುಪಾಲರೇ ಎಲ್ಲಾ ರೀತಿಯ ಆಡಳಿತಾತ್ಮಕ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ.ಆದರೆ, ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈಗ ರಾಜ್ಯ ಸರ್ಕಾರ ಪ್ರಾಂಶುಪಾಲರ ಹಾಗೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ನಿಯಮವನ್ನು ಸಿದ್ಧಪಡಿಸಿದೆ. ಈ ಎರಡು ನೇಮಕಾತಿ ಪ್ರಕ್ರಿಯೆಯನ್ನು ಪ್ರವೇಶ ಪರೀಕ್ಷೆಯ ಮೂಲಕ ಮಾಡಿಕೊಳ್ಳಲಾಗುತ್ತದೆ.
ಪ್ರವೇಶ ಪರೀಕ್ಷೆಯನ್ನ ನಡೆಸುವ ಜವಾಬ್ದಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ್ದು(ಕೆಇಎ) ಅಭ್ಯರ್ಥಿಗಳು ಪಡೆಯುವ ಅಂಕದ ಆಧಾರದಲ್ಲಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲು ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ನೇಮಕಾತಿ ಪ್ರಾಕಾರ ರಚನೆ ಮಾಡಲಾಗುತ್ತದೆ. ಈವರೆಗೆ ಹಿರಿಯ ಪ್ರಾಧ್ಯಾಪಕರಿಗೆ ಮುಂಬಡ್ತಿ ನೀಡುವ ಮೂಲಕ ಪ್ರಾಂಶುಪಾಲರನ್ನಾಗಿ ನೇಮಿಸಲಾಗುತಿತ್ತು.
ಇನ್ನು ಮುಂದೆ ಪ್ರವೇಶ ಪರೀಕ್ಷೆ ನಡೆಸಿ, ನೇಮಕಾತಿ ಮೂಲಕ ಪ್ರಾಂಶುಪಾಲರ ಆಯ್ಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ಇಲಾಖೆ ಸಿದ್ದಪಡಿಸಿರೋ ಕರಡು ನಿಯಮದಂತೆ ಪ್ರತಿ ಐದು ವರ್ಷಕ್ಕೊಮ್ಮೆ ಪ್ರಾಂಶುಪಾಲರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪ್ರಾಂಶುಪಾಲರ ಐದು ವರ್ಷಗಳ ಸೇವಾ ಅವಧಿ ಬಳಿಕ ವಿಷಯ ಹಾಗೂ ಸೇವಾನುಭವಕ್ಕೆ ಅನುಗುಣವಾಗಿ ಸಂಬಂಧಪಟ್ಟ ಕಾಲೇಜಿನಲ್ಲಿ ಸಹಾಯಕ ಅಥವಾ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬಹುದಾಗಿದೆ.