ಬೆಂಗಳೂರು : ರಾಜ್ಯದ ಯಾವುದೇ ಭಾಗಗಳಲ್ಲಿ ಖಾಸಗಿ ಉದ್ದಿಮೆದಾರರು ಕೈಗಾರಿಕೆಗಳನ್ನು ಸ್ಥಾಪಿಸಿದರೆ ಅವರಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯ, ಉತ್ತೇಜನ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆ ಶಾಸಕ ಬೆಳ್ಳಿ ಪ್ರಕಾಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತದೆ. ಕರ್ನಾಟಕ ಕೈಗಾರಿಕಾ ನೀತಿ 2020-25ರ ಅನ್ವಯ ಉತ್ತೇಜನ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ನಗಾದಿಯತ್ ಕಾವಲ್‍ನಲ್ಲಿ ಒಟ್ಟು 236.38 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸಲು ಕೆಐಡಿಬಿ ಯಿಂದ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಯಾರೇ ಬಂಡವಾಳ ಹೂಡಲು ಬಂದರೂ ಸರ್ಕಾರ ಅವರಿಗೆ ಎಲ್ಲ ನೆರವು ನೀಡಲಿದೆ. ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾ ಸಾಮಗ್ರಿಗಳಾದ ತೆಂಗಿನ ನಾರು, ಅಡಿಕೆ, ಹಲಸಿನ ಉತ್ಪನ್ನ ಹಾಗೂ ಇತರೆ ಆಹಾರೋತ್ಪನ್ನ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ದಿಮೆದಾರರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಹೊಸದಾಗಿ ಸ್ಥಾಪಿಸುತ್ತಿರುವ ಕೈಗಾರಿಕೆಗಳು ಅಭಿವೃದ್ಧಿಯಾದ ನಂತರ ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ನಿಯಮಾನುಸಾರ ರಿಯಾಯ್ತಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಸಚಿವರ ಆಕ್ಷೇಪ : ನ್ಯಾಯಾಲಯದ ನಿರ್ದೇಶನದಂತೆ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಸಂಬಂಧಿಸಿದ ಸಚಿವರು ನೀಡಿದ ಉತ್ತರಕ್ಕೆ ಸಚಿವ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಪ್ರಶ್ನೋತ್ತರ ವೇಳೆ ಶಾಸಕ ಲಿಂಗೇಶ್ ಅವರು, ತಮ್ಮ ಕ್ಷೇತ್ರ ಬೇಲೂರಿನಲ್ಲಿ ಅಂಗನವಾಡಿ ಕಟ್ಟಡಗಳ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಆಚಾರ್ ಹಾಲಪ್ಪ ಅವರಿಗೆ ಪ್ರಶ್ನೆ ಕೇಳಿದರು. ಈ ವೇಳೆ ಉತ್ತರಿಸಿದ ಸಚಿವರು, ಉಚ್ಛನ್ಯಾಯಾಲಯದ ಆದೇಶದಂತೆ ಸ್ವಂತ ಕಟ್ಟಡದಲ್ಲಿ ಮತ್ತು ಸರ್ಕಾರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ, ಸರ್ಕಾರದ ಸೂಚನೆಯಂತೆ ನಾವು ಅಂಗನವಾಡಿ ಕಟ್ಟಡಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇವೆ ಎಂದು ಹೇಳಬೇಕು. ನ್ಯಾಯಾಲಯದ ನಿರ್ದೇಶನದಂತೆ ಹೇಳುವುದು ಸರಿಯಲ್ಲ. ಆಡಳಿತದಲ್ಲಿ ನ್ಯಾಯಾಲಯ ನಿರ್ದೇಶನ ನೀಡಲು ಸಾಧ್ಯವೇ? ಜನಪ್ರತಿನಿಧಿಗಳ ಸರ್ಕಾರದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಎಂದು ಹೇಳುವುದು ಸರಿಯಲ್ಲ. ಅಧಿಕಾರಿಗಳು ಬರೆದು ಕೊಟ್ಟಿದ್ದನ್ನು ಸಚಿವರು ಈ ರೀತಿ ಹೇಳಬಾರದು ಎಂದು ಸಲಹೆ ನೀಡಿದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರುಗಳಿಗೆ ಉತ್ತರ ಬರೆದುಕೊಡುವಾಗ ಅಧಿಕಾರಿಗಳು ಎಚ್ಚರಿಕೆಯಿಂದ ಬರೆದುಕೊಡಬೇಕು. ಈ ರೀತಿ ಬರೆದುಕೊಡುವುದು ಸರಿಯಲ್ಲ. ಕಾನೂನು ಸಚಿವರು ಸೂಕ್ಷ್ಮವಾದ ಅಂಶಗಳನ್ನು ಸದನದ ಗಮನಕ್ಕೆ ತಂದಿದ್ದಾರೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.