ಬೆಂಗಳೂರು: ಆನೆ ದಾಳಿ ವಿಚಾರ ಪ್ರಸ್ತಾಪಿಸಿ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ರೂಪಿಸಬೇಕೆಂದು ಜೆಡಿಎಸ್ ಸದಸ್ಯರು ಧರಣಿ ನಡೆಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಲಿಂಗೇಶ್ ಈ ವಿಷಯ ಪ್ರಸ್ತಾಪಿಸಿ, ಬೇಲೂರು ಕ್ಷೇತ್ರದ ಅರೆಹಳ್ಳಿ ಹೋಬಳಿಯಲ್ಲಿಂದು ಬೆಳಗ್ಗೆ ಇಬ್ಬರು ಕೂಲಿ ಕಾರ್ಮಿಕರು ಕಾಡಾನೆ ತುಳಿತಕ್ಕೆ ಮೃತಪಟ್ಟಿದ್ದಾರೆ. ಜನರಿಗೆ ರಕ್ಷಣೆ ಕೊಡಿ. ಇಲ್ಲವೇ ವಿಷ ಕೊಡಿ. ಆನೆ ಕಾರಿಡಾರ್ ಇಲ್ಲ. ನಿಯೋಗ, ಆಯೋಗ ಅಂತ ಬರುತ್ತದೆ ಎಂದು ಪರಿಶೀಲನೆ ಮಾಡುತ್ತದೆ. ಕಾಫಿ, ಭತ್ತ, ಬಾಳೆ ಎಲ್ಲವೂ ಹಾಳಾಗಿದೆ. 5 ಲಕ್ಷ ಪರಿಹಾರ ಸಾಲದು 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ಶಾಸಕ ಹೆಚ್.ಕೆ.ಕುಮಾರಸ್ವಾಮಿ, ಆಲೂರು, ಬೇಲೂರು, ಅರಕಲಗೂಡು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಇಂದು ಇಬ್ಬರು ಮೃತಪಟ್ಟಿದ್ದಾರೆ. ಪರಿಹಾರವೂ ಕೊಡುವುದಿಲ್ಲ. ವನ್ಯಜೀವಿ ಉಪವಿಭಾಗ ಮಾಡಿ ಎಂದರೆ ಕಥೆ ಹೇಳುತ್ತಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಆನೆ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡಲಾಗುವುದು. ಆನೆ ಹಾವಳಿ ತಡೆಗೆ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಉತ್ತರದಿಂದ ತೃಪ್ತರಾಗದ ಲಿಂಗೇಶ್, ಹೆಚ್.ಕೆ.ಕುಮಾರಸ್ವಾಮಿ, ಬಾಲಕೃಷ್ಣ, ವೆಂಕಟರಾವ್ ನಾಡಗೌಡ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಷಯದ ಗಂಭೀರತೆ ಅರ್ಥ ಮಾಡಿಕೊಂಡು ತಡವಾಗಿ ಪತ್ರ ಕಳುಹಿಸಿದರೂ ಶೂನ್ಯ ವೇಳೆಯಲ್ಲಿ ಮಾನವೀಯತೆಯಿಂದ ಅವಕಾಶ ಮಾಡಿಕೊಡಲಾಗಿದೆ ಎಂದು ಸಚಿವರು ಉತ್ತರ ಕೊಟ್ಟಿದ್ದಾರೆ. ಆನೆ ತುಳಿತ ಆಕಸ್ಮಿಕವಾಗಿ ಆಗಿದೆ. ಹೆಚ್ಚು ಬೆಳೆಸುವುದು ಬೇಡ ಎಂದು ಹೇಳಿದರು.
ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕಾಡಾನೆ ಹಾವಳಿ ಹಲವು ಕಡೆ ಇದೆ. ಈ ಬಗ್ಗೆ ಚರ್ಚೆಗೆ ಅರ್ಧಗಂಟೆ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು.
ಈ ವಿಷಯ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಸ್ಪೀಕರ್ ಭರವಸೆ ನೀಡಿದರು. ನಂತರ ಜೆಡಿಎಸ್ ಶಾಸಕರು ಧರಣಿ ವಾಪಸ್ ಪಡೆದರು.
ಹುತಾತ್ಮ ಯೋಧನಿಗೆ ಪರಿಹಾರ ಕೊಡಿ: ಕಾಶ್ಮೀರದಲ್ಲಿ ಹಿಮಪಾತಕ್ಕೆ ಸಿಲುಕಿ ಮೃತಪಟ್ಟ ಕೊಡಗಿನ ಯೋಧ ಆಲ್ತಾಫ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುವಂತೆ ಪ್ರತಿಪಕ್ಷದ ಉಪನಾಯಕ ಯು. ಟಿ ಖಾದರ್ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಇಂದು ವಿಷಯ ಪ್ರಸ್ತಾಪ ಮಾಡಿದ ಖಾದರ್, ಸರ್ಕಾರದ ನಡೆ ಅತ್ಯಂತ ನೋವಿನ ವಿಚಾರ. ಸಾವಿನಲ್ಲಿ ಏಕೆ ತಾರತಮ್ಯ? ಎಂದು ಪ್ರಶ್ನಿಸಿದರು.
2013 ರಿಂದ 19 ರ ವರೆಗೆ ಸರ್ಕಾರ ಹುತಾತ್ಮ ಯೋಧರಿಗೆ ಪರಿಹಾರ ನೀಡಿದೆ. ಅಲ್ತಾಫ್ ಹುತಾತ್ಮರಾಗಿ ಒಂದು ತಿಂಗಳು ಆದರೂ ಪರಿಹಾರ ಏಕಿಲ್ಲ?. ಕೆಲವು ಕಡೆ ಹತ್ಯೆ ಆದರೆ ಪರಿಹಾರ ನೀಡುತ್ತಿರಿ, ಕೆಲವು ಕಡೆ ಕೊಡುತ್ತಿಲ್ಲ. ಸಮೀರ್ ಶಹಾಪುರ್ ಹತ್ಯೆ ಆದರೂ ಪರಿಹಾರ ಕೊಟ್ಟಿಲ್ಲ. ಯಾವುದೇ ಸಾವು ಬೆಂಬಲಿಸಲು ಸಾಧ್ಯವಿಲ್ಲ. ಎಲ್ಲ ಸಾವಿಗೂ ಮೌಲ್ಯ, ಗೌರವ ಇದೆ. ಸಾವಿನಲ್ಲಿ ತಾರತಮ್ಯ ಬೇಡ ಎಂದರು.
ಈ ವೇಳೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸಾವಿನಲ್ಲಿ ತಾರತಮ್ಯ ಮಾಡಲ್ಲ. ಸೈನಿಕರು, ಸೈನಿಕರೇ. ಹುತಾತ್ಮರು, ಹುತಾತ್ಮರೇ. ಗೃಹ ಸಚಿವರ ಜೊತೆ ಮಾತನಾಡಿ ಚರ್ಚಿಸಿ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆಯಿಂದ ಪಿಂಕ್ ಬಾಲ್ ಟೆಸ್ಟ್.. ಮ್ಯೂಸಿಕ್ ಬಳಸಲು ಅನುಮತಿ, ನಗರ ಪೊಲೀಸರಿಂದ ಬಿಗಿ ಭದ್ರತೆ