ಬೆಂಗಳೂರು : ಮೂವತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘಕ್ಕೆ ಚುನಾವಣೆ ನಡೆಯುತ್ತಿದೆ. ಇದೇ ನ.28ರ ಭಾನುವಾರದಂದು ಮತದಾನ ನಡೆಯಲಿದೆ.
ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘಕ್ಕೆ ಕಳೆದ 30 ವರ್ಷಗಳಿಂದ ಅವಿರೋಧವಾಗಿ ಆಯ್ಕೆ ನಡೆಯುತ್ತಿತ್ತು. ಸಂಘಕ್ಕೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ಸಂಘದ ಪ್ರಾರಂಭದಿಂದಲೂ ಅದರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತ ಬಂದಿರುವ ಶಂಕರಯ್ಯ ರಾಚಯ್ಯ ಮಠಪತಿ ಅವರು ಈ ಬಾರಿ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಸಂಘದ ಶ್ರೇಯೋಭಿವೃದ್ದಿಗಾಗಿ ತಮ್ಮನ್ನು ಬೆಂಬಲಿಸುವಂತೆ ತೆರಿಗೆ ಸಲಹೆಗಾರರ ಸಂಘದ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.
ತೆರಿಗೆ ಸಾಹಿತ್ಯವನ್ನು ಕನ್ನಡದಲ್ಲಿ ಪ್ರಕಟಿಸುವ ಮೂಲಕ ಗ್ರಾಮೀಣ ಭಾಗದ ತೆರಿಗೆ ಸಲಹೆಗಾರರಿಗೆ ನೆರವಾಗುತ್ತಿರುವ ಇವರು, ಸಂಘದ ಚಟುವಟಿಕೆಗಳಲ್ಲಿ ಯಾವುದೇ ಗುಂಪುಗಾರಿಕೆ ಹಾಗೂ ರಾಜಕೀಯ ಲೇಪವಿಲ್ಲದೆ ಸೇವೆ ಮುಂದುವರೆಸಿಕೊಂಡು ಹೋಗುವುದಾಗಿ ಹಾಗೂ ಸಂಘದ ಯಶಸ್ಸಿಗೆ ಶ್ರಮಿಸಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಮುಂದಿನ ದಿನಗಳಲ್ಲಿ ತೆರಿಗೆ ಸಲಹೆಗಾರರಿಗೆ ಆತ್ಮನಿರ್ಭರ ಭಾರತ ಕೌಶಲ್ಯಾಭಿವೃದ್ದಿಯ ಪರಿಕಲ್ಪನೆ ಅಡಿ ಜಾಯಿಂಟ್ ಸರ್ಟಿಫಿಕೇಟ್ ಮೂಲಕ ಚಾರ್ಟೆಡ್ ಟ್ಯಾಕ್ಸ್ ಪ್ರ್ಯಾಕ್ಟಿಷನರ್ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಆರಂಭಿಸುವುದು, ತೆರಿಗೆ ಸಲಹೆಗಾರರು ಸ್ವಾವಲಂಬಿಗಳಾಗಲು ಜಿಎಸ್‌ಟಿ 9ಸಿ ಆಡಿಟ್ ಹಕ್ಕನ್ನು ಜಿಎಸ್‌ಟಿಪಿ ಪರೀಕ್ಷೆ ಪಾಸಾದವರಿಗೆ ದೊರೆಯುವಂತೆ ಮಾಡುವುದು, ಜಿಎಸ್‌ಟಿ ಸಲಹೆಗಾರರಿಗೆ ಅವಶ್ಯವಿರುವ ಆನ್‌ಲೈನ್ ಪರೀಕ್ಷೆಗೆ ಹಕ್ಕು ದೊರೆಯುವಂತೆ ಮಾಡುವುದು ಸೇರಿದಂತೆ ರಾಜ್ಯ ಸಂಘಟನೆಯನ್ನು ಸೌಹಾರ್ದಯುತವಾಗಿ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.