ಬೆಂಗಳೂರು: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗವು ತಪಾಸಣೆ ಚುರುಕುಗೊಳಿಸಿದೆ. ನಿನ್ನೆ ಸುಮಾರು 72.30 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ನಿಪ್ಪಾಣಿ ಕ್ಷೇತ್ರದಲ್ಲಿ 25 ಲಕ್ಷ ರೂ. ಮೌಲ್ಯದ 23,880 ಲೀಟರ್ ಮದ್ಯ ಮತ್ತು ಶಿವಾಜಿನಗರ ಕ್ಷೇತ್ರದಲ್ಲಿ 58.59 ಲಕ್ಷ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಚಿಕ್ಕಪೇಟೆ ಕ್ಷೇತ್ರದಲ್ಲಿ 25 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 80.23 ಕೋಟಿ ರೂ. ನಗದು, 19.31 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. 52.23 ಕೋಟಿ ರೂ. ಮೌಲ್ಯದ 13.94 ಲಕ್ಷ ಲೀಟರ್ ಮದ್ಯ, 16.10 ಕೋಟಿ ರೂ. ಮೌಲ್ಯದ 1,084.03 ಕೆಜಿ ಮಾದಕ ವಸ್ತುಗಳು, 73.80 ಕೋಟಿ ರೂ. ಮೌಲ್ಯದ 145.55 ಕೆಜಿ ಚಿನ್ನ, 77.87 ಕೋಟಿ ರೂ. ಮೌಲ್ಯದ 727.45 ಕೆಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 245.76 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : ಚುನಾವಣ ಕಣದಲ್ಲಿ ಝಣ ಝಣ ಕಾಂಚಾಣ.. ನಗದು, ಮದ್ಯ ಸೇರಿ ವಶಕ್ಕೆ ಪಡೆದ ವಸ್ತುಗಳ ಮೊತ್ತ 187 ಕೋಟಿ!
ಇನ್ನು 1,795 ಎಫ್ಐಆರ್ ಮತ್ತು 69,656 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 4,529 ಪ್ರಕರಣಗಳನ್ನು ದಾಖಲಿಸಲಾಗಿದೆ. 7,238 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 12,107 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ.
ಇದನ್ನೂ ಓದಿ : ಚುನಾವಣಾ ಅಕ್ರಮ : ₹ 2.80 ಕೋಟಿ ಹಣ ವಶಕ್ಕೆ ಪಡೆದ ಚುನಾವಣಾ ಆಯೋಗ
ನೀತಿ ಸಂಹಿತೆ ಉಲ್ಲಂಘಿಸಿ ಹಣ ಸಾಗಣೆ : ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಣೆ ಮಾಡುತ್ತಿದ್ದ 1.85 ಲಕ್ಷ ರೂಪಾಯಿ ನಗದನ್ನು ದೊಡ್ಡಬಳ್ಳಾಪುರ ನಗರದ ಅರಳು ಮಲ್ಲಿಗೆ ವೃತ್ತದಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಕಲ್ಲುಪೇಟೆ ನಿವಾಸಿ ಡಿ ವಿ ಆನಂದ್ ಎಂಬುವರ ಕಾರನ್ನು ತಪಾಸಣೆ ನಡೆಸಿದಾಗ ಚುನಾವಣೆ 1,85,22 ರೂಪಾಯಿ ನಗದು ಕಂಡು ಬಂದಿದ್ದು, ಜಪ್ತಿ ಮಾಡಲಾಗಿದೆ. ಎಸ್‌ಎಸ್ ತಂಡದ ಮುಖ್ಯಸ್ಥ ನಿಂಗನಾಯಕ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಹಣ ಸಾಗಿಸುತ್ತಿದ್ದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಸೊಂಟಕ್ಕೆ ನೋಟು ಕಟ್ಟಿಕೊಂಡು ಸಾಗಣೆ: ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು