ಬೆಂಗಳೂರು: ಮೈತ್ರಿ ಸರ್ಕಾರ ಪತನದ ನಂತರ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಉಪಚುನಾವಣೆ ಎದುರಿಸುವ ಅನರ್ಹ ಶಾಸಕರ ಕನಸನ್ನು ಅನಿರೀಕ್ಷಿತವಾಗಿ ಕೇಂದ್ರ ಚುನಾವಣೆ ಆಯೋಗ ರಾಜ್ಯದಲ್ಲಿ ಚುನಾವಣೆ ದಿನಾಂಕ ಪ್ರಕಟಿಸುವ ಮೂಲಕ ಭಗ್ನಗೊಳಿಸಿದೆ.
ಸಚಿವರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ನಂತರ ಉಪಚುನಾವಣೆಗೆ ಹೋದರೆ ಮತದಾರರ ವಿಶ್ವಾಸ ಗಳಿಸಿ ಹೆಚ್ಚಿನ ಮತಗಳಿಂದ ಗೆದ್ದು ಬರಬಹುದೆನ್ನುವ ಕನಸು ಎಲ್ಲ ಅನರ್ಹ ಶಾಸಕರಿಗಿತ್ತು.
ಇದೇ ಕಾರಣಕ್ಕೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿಯ ಜೊತೆಗೆ ಇಂತಹದ್ದೇ ಖಾತೆಗಳನ್ನು ಹಂಚಿಕೆ ಮಾಡಬೇಕೆಂದು ಅವರು ಪಟ್ಟು ಹಿಡಿದಿದ್ದರು. ತಮಗೆ ನೀಡಲಿರುವ ಖಾತೆಗಳನ್ನು ಸಚಿವರಿಗೆ ಹಂಚಿಕೆ ಮಾಡದೇ ಮುಖ್ಯಮಂತ್ರಿಗಳ ಬಳಿಯೇ ಇರುವಂತೆ ಅನರ್ಹ ಶಾಸಕರು ನೋಡಿಕೊಂಡಿದ್ದರು. ಆದರೀಗ ಕೇಂದ್ರ ಚುನಾವಣಾ ಆಯೋಗ ಇದ್ದಕ್ಕಿದ್ದಂತೆ ಉಪಚುನಾವಣೆ ದಿನಾಂಕ ಪ್ರಕಟಿಸಿರುವುದು ಅನರ್ಹರನ್ನು ಭ್ರಮನಿರಸನಗೊಳಿಸಿದೆ.
ಸುಪ್ರೀಂಕೋರ್ಟ್ನಲ್ಲಿ ಶಾಸಕ ಸ್ಥಾನ ಅನರ್ಹ ಮಾಡಿರುವ ಪ್ರಕರಣದ ಅರ್ಜಿಯ ವಿಚಾರಣೆ ವಿಳಂಬವಾಗಿರುವ ಬಗ್ಗೆಯೇ ಸಾಕಷ್ಟು ಅಸಮಾಧಾನಗೊಂಡಿದ್ದ ಈ ಶಾಸಕರಿಗೆ ಉಪ ಚುನಾವಣೆ ಎದುರಾಗಿರುವುದು ಮತ್ತಷ್ಟು ಕೆರಳಿಸಿದೆ.
ಸಿಎಂ ವಿರುದ್ಧ ಅನರ್ಹರ ಅತೃಪ್ತಿ?
ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ವಿಳಂಬ ಆಗಿರುವುದನ್ನೇ ಸಹಿಸಿಕೊಳ್ಳದ ಅನರ್ಹ ಶಾಸಕರಿಗೆ ಉಪ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿರುವುದು ಸಹಜವಾಗಿಯೇ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಂಕಷ್ಟದ ಪರಿಸ್ಥಿತಿ ಎದುರಾದ ಬಗ್ಗೆ ಅನರ್ಹ ಶಾಸಕರು ಸಿಎಂ ಯಡಿಯೂರಪ್ಪ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ನಮ್ಮ ಬಗೆಗಿದ್ದ ಕಾಳಜಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಲ್ಲ. ನಮ್ಮ ನೆರವಿನಿಂದಲೇ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಹೀಗೆ ನಿರ್ಲಕ್ಷ್ಯ ವಹಿಸುವುದು ಸರಿಕಾಣುವುದಿಲ್ಲ ಎಂದು ಮುಖ್ಯಮಂತ್ರಿಗಳ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ದಿಢೀರನೆ ಚುನಾವಣೆ ಘೋಷಣೆಯಾಗಿದೆ. ಸುಪ್ರೀಂಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ. ಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುವುದು ಯಾವಾಗ? ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆ ಹೇಗೆ ಕೈಗೆತ್ತಿಕೊಳ್ಳುವುದು? ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸರ್ಕಾರ ಅನರ್ಹರ ಕ್ಷೇತ್ರಗಳಿಗೆ ಹಣ ಬಿಡುಗಡೆ ಸಾಧ್ಯವೇ? ಸರ್ಕಾರದಲ್ಲಿ ಯಾವುದೇ ಅಧಿಕಾರ ಇಲ್ಲದೇ ತಾವು ಚುನಾವಣೆ ಎದುರಿಸುವುದು ಹೇಗೆ? ಪಕ್ಷಾಂತರ ಮಾಡಿದ ಗಂಭೀರ ಆರೋಪ ಪ್ರಕರಣದಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಗಳನ್ನು ಎದುರಿಸುವುದು ಹೇಗೆ? ಎನ್ನುವ ಪ್ರಶ್ನೆಗಳ ಸುರಿಮಳೆಯನ್ನು ಅನರ್ಹರು ಮುಖ್ಯಮಂತ್ರಿಗಳಿಗೆ ಕೇಳಿದ್ದಾರೆ.
ಅನರ್ಹ ಶಾಸಕರ ಪ್ರಶ್ನೆಗಳಿಂದ ಆತಂಕಕ್ಕೆ ಒಳಗಾಗಿರುವ ಮುಖ್ಯಮಂತ್ರಿಗಳು ನಂಬಿದವರಿಗೆ ತಮ್ಮಿಂದ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿ ಧೈರ್ಯ ತುಂಬಿದ್ದಾರೆ.