ಬೆಂಗಳೂರು: ಈ ಮೊದಲು ಕೂಡ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ನೀತಿಯೇ ಅವೈಜ್ಞಾನಿಕವಾಗಿದ್ದು, ಜ್ಞಾನ ಕೇವಲ ಒಂದು ವರ್ಗದಿಂದ ಎನ್ನುವಂತೆ ಪ್ರತಿಬಿಂಬಿಸಲಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನ್ ಆರಾಧ್ಯ ಹೇಳಿದರು. ನಗರದ ಶಾಸಕರ ಭವನ ಸಮ್ಮೇಳನ ಸಭಾಂಗಣದಲ್ಲಿ ನಡೆದ ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಷನ್ ಆಯೋಜನೆ ಮಾಡಿದ್ದ ದುಂಡು ಮೇಜಿನ ಸಭೆಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ನೀತಿ ರೂಪಿಸಲು ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಈ ವೇಳೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸುವುದಾಗಿ ಹೇಳಿತ್ತು. ಅದಕ್ಕೆ ಸಮಿತಿಯನ್ನೂ ಕೂಡ ರಚಿಸಿತ್ತು. ಆದರೆ ಅದರಲ್ಲಿ ಶಿಕ್ಷಣ ತಜ್ಞರೇ ಇರಲಿಲ್ಲ ಎಂದು ವ್ಯಂಗ್ಯವಾಡಿದರು. ಈಗಿನ ಹೊಸ ಕಾಂಗ್ರೆಸ್ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ಹೇಗೆ ರೂಪಿಸುತ್ತಾರೆ ಎಂಬುದನ್ನು ನೋಡಬೇಕಿದೆ. ಶಿಕ್ಷಣ ವ್ಯವಸ್ಥೆಯನ್ನು ಸಂವಿಧಾನದ ಆಶಯದಂತೆ ಕಟ್ಟಬೇಕಿದೆ. ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮರ್ಥ, ಪ್ರಾತಿನಿಧಿಕ ಸಮಿತಿ ರಚನೆ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಸಿ ರೂಮ್ನಲ್ಲಿ ಕುಳಿತುಕೊಂಡು ಮಾತನಾಡಿದವರು ಶಿಕ್ಷಣ ತಜ್ಞರಾಗುವುದಿಲ್ಲ. ಈ ಬಾರಿ ರಾಜ್ಯ ಶಿಕ್ಷಣ ನೀತಿ ರೂಪಿಸುವವರು ಯೋಗ್ಯರಾಗಿರಬೇಕು. ಪ್ರಾಮಾಣಿಕ ಚಿಂತಕರು, ಅಲ್ಪಸಂಖ್ಯಾತರು, ಮಹಿಳೆಯರಿಗೆ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ದುಂಡು ಮೇಜಿನ ಸಭೆಯ ಅಧ್ಯಕ್ಷತೆಯನ್ನು ಸಾಹಿತಿ, ಚಿಂತಕರಾದ ಡಾ ಸಿದ್ದನಗೌಡ ಪಾಟೀಲ್ ವಹಿಸಿದ್ದರು. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ, ವೈದ್ಯೆ ಹಾಗೂ ಲೇಖಕಿ ಡಾ ವಸುಂದರ ಭೂಪತಿ, ವಕೀಲೆ ಅಖಿಲ ವಿದ್ಯಾಸಂದ್ರ, ಎಐಎಸ್ಎಫ್ ರಾಜ್ಯಾಧ್ಯಕ್ಷೆ ವೀಣಾ ನಾಯ್ಕ್ ಸೇರಿದಂತೆ 20ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಚಿಂತಕರು, ವಿದ್ಯಾರ್ಥಿಗಳು, ಪೋಷಕ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು: ಕರ್ನಾಟಕ ರಾಜ್ಯ ಮಾದರಿ ಶಿಕ್ಷಣ ನೀತಿ ರೂಪಿಸಲು ಸರ್ಕಾರಕ್ಕೆ ಒತ್ತಾಯ. ಕರ್ನಾಟಕ ಶಿಕ್ಷಣ ನೀತಿ ರೂಪಿಸಲು ಸರ್ಕಾರ ಈ ಕೂಡಲೇ ತಜ್ಞರ ಸಮಿತಿ ರಚಿಸಬೇಕು. ಆ ತಜ್ಞರು ಕರ್ನಾಟಕದ ನೆಲ, ಜಲ, ಭಾಷೆ, ಸಂಸ್ಕೃತಿಯ ಅರಿವು ಇರುವವರಾಗಿರಬೇಕು. ಎ.ಐ.ಎಸ್.ಎಫ್ ಸಂಘಟನೆಯು ನಾಡಿನಾದ್ಯಂತ ರಾಜ್ಯ ಶಿಕ್ಷಣ ರೂಪಿಸಲು ಜನಾಭಿಪ್ರಾಯ ಸಂಗ್ರಹಿಸುವುದು. ಇಂದು ಅಧಿಕೃತ ಚಾಲನೆ ದೊರೆತಿದ್ದು, ರಾಜ್ಯದ ಪ್ರಮುಳ ಜಿಲ್ಲೆಗಳಲ್ಲಿ ದುಂಡುಮೇಜಿನ ಸಮಾವೇಶ ಆಯೋಜಿಸಿವುದು. ಜನಾಭಿಪ್ರಾಯ ಸಂಗ್ರಹದ ನಂತರ ಕರುಡು ರಚಿಸಿ ನಾಡಿನ ವಿದ್ಯಾರ್ಥಿ, ಪೋಷಕರು, ಶಿಕ್ಷಕರ, ಸಾಹಿತಿಗಳು, ಶಿಕ್ಷಣ ತಜ್ಞರ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.
ಇದನ್ನೂ ಓದಿ: 9ನೇ ತರಗತಿ, ಪ್ರಥಮ ಪಿಯುಸಿಗೆ ಈ ವರ್ಷದಿಂದಲೇ ಪಬ್ಲಿಕ್ ಪರೀಕ್ಷೆ..