ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ. ಶಿಕ್ಷಣ ಸಚಿವ ಸುರೇಶ್‌ಕುಮಾರ್ ಮತ್ತೆ ವಿದ್ಯಾರ್ಥಿಗಳೊಂದಿಗೆ ಮಾತುಕತೆಗೆ ಇಳಿದಿದ್ದಾರೆ. ಗೊಂದಲದಲ್ಲಿದ್ದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸರ್ಪ್ರೈಸ್ ಫೋನ್ ಕಾಲ್ ಮಾಡಿದ್ದು, ಮಿನಿಸ್ಟರ್ ವಾಯ್ಸ್ ಕೇಳಿ ವಿದ್ಯಾರ್ಥಿ ಫುಲ್ ಖುಷ್ ಆಗಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಯ ಪೋಷಕರು ಒಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರೋದು ಹೀಗೆ. ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ನಿನ್ನೆ ರಾತ್ರಿ ಊಟ ಮಾಡುತ್ತಾ ಕುಳಿತಿದ್ದಾಗ ನನ್ನ ಫೋನ್ ರಿಂಗಾಯಿತು. ಯಾರೆಂದು ನೋಡಿದಾಗ ಅಚ್ಚರಿಯಾಯಿತು. ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರ ಕರೆ ಅದಾಗಿತ್ತು. ಎಸ್ಎಸ್ಎಲ್ಸಿ ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷೆ ಮುಂದೂಡಿ ಎಂದು ಮನವಿ ಮಾಡಿದ್ದ ನನ್ನ ಫೇಸ್‌ಬುಕ್ ಬರಹ ನೋಡಿ ಕರೆ ಮಾಡಿ, ಪರೀಕ್ಷಾರ್ಥಿಯಾದ ನನ್ನ ಮಗಳ ಜೊತೆಯೂ ಮಾತನಾಡಿ ಆತಂಕ ನಿವಾರಿಸುವ ಪ್ರಯತ್ನ ಮಾಡಿದ್ದರು.
ನಿನ್ನೆ ಪರೀಕ್ಷೆ ಮುಗಿದಿದ್ದು, ಮೊದಲ ದಿನ ಆತಂಕವಾಗಿದ್ದು ನಿಜ. ಪರೀಕ್ಷಾ ಕೇಂದ್ರದಲ್ಲಿ ಮಾಡಿದ್ದ ವ್ಯವಸ್ಥೆಗಳನ್ನು ನೋಡಿದ ಮೇಲೆ ಅನಂತರದ ಪತ್ರಿಕೆಗಳ ಸಂದರ್ಭದಲ್ಲಿ ಆತಂಕ ದೂರವಾಗಿತ್ತು. ನಿನ್ನೆ ಸುಸೂತ್ರವಾಗಿ ಪರೀಕ್ಷೆ ಮುಗಿದ ಬಳಿಕ ಚಾಮರಾಜನಗರದ ಸಿ.ಆರ್. ಬಾಲರಪಟ್ಟಣ ಪರೀಕ್ಷಾ ಕೇಂದ್ರದಿಂದ ಹೊರ ಬಂದ ಮಗಳಲ್ಲಿ ಪರೀಕ್ಷೆ ಸಂಭ್ರಮವೋ ಸಂಭ್ರಮ. ಬಹಳ ದಿನಗಳ ಕಾಲ ಕಾಯಿಸಿ, ಕಾಡಿಸಿದ್ದ ಪರೀಕ್ಷೆಯ ಹೊರೆ ಇಳಿಸಿದ ಹಗುರ ಭಾವ.
ನಾವೆಲ್ಲ ರಾತ್ರಿ ಊಟ ಮಾಡುತ್ತಿದ್ದಾಗ ಬಂದ ಸಚಿವರ ಕರೆ ಸ್ವೀಕರಿಸಿದಾಗ, ಅತ್ತಲಿಂದ ನಾನು ಸುರೇಶ್ ಕುಮಾರ್ ಎಂದರು. ನಿಮ್ಮ ಮಗಳ ಜೊತೆ ಮಾತನಾಡಬೇಕು ಎಂದು ಕುಶಾಲು ನಗೆ ನಕ್ಕರು. ಮಗಳು ಗೌರಿಯನ್ನು ಕರೆದು ಫೋನ್ ಕೊಟ್ಟೆ. ಅವರು ಅವಳೊಡನೆ ಮಾತನಾಡಿದ್ದನ್ನು ನಾನು ಬರೆಯುವುದಕ್ಕಿಂತ ನೀವೇ ಕೇಳಿದರೆ ಚೆನ್ನಾಗಿರುತ್ತದೆ. ಅದರ ಆಡಿಯೋ ಇಲ್ಲಿದೆ ಆಲಿಸಿ ಎಂದು ಆಡಿಯೋ ಕ್ಲಿಪ್ವೊಂದನ್ನು ಹಾಕಿದ್ದಾರೆ.
ಸಚಿವರು, ವಿದ್ಯಾರ್ಥಿನಿ ಗೌರಿಗೆ ಎಕ್ಸಾಂ ಮುಗಿದಿದೆ ರಿಲ್ಯಾಕ್ಸ್ ಮೂಡ್ನಲ್ಲಿ ಇರಿ. ಅಗಸ್ಟ್ನಲ್ಲಿ ರಿಸಲ್ಟ್ ನೀಡುತ್ತೇವೆ. ಮನೆಯಲ್ಲಿದ್ದು ಚೆನ್ನಾಗಿ ರೆಸ್ಟ್ ಮಾಡಿ, ಪರೀಕ್ಷಾ ಕೇಂದ್ರದಲ್ಲಿ ಕಲಿತಿರುವ ಕೊರೊನಾ ಪಾಠವನ್ನು ಮರೆಯದೇ ಇರಿ ಎಂದು ಕಿವಿ ಮಾತು ಹೇಳಿದರು.