ಬೆಂಗಳೂರು: ನಾವು ನಮ್ಮ ಸಂಸ್ಕೃತಿಗಳ ಬಗ್ಗೆ ಬೆಳಕು ಚೆಲ್ಲಬೇಕು.. ಸರ್ವೇಜನಾ ಸುಖಿನೋಭವಂತು ಎಂಬುವಂತೆ ಎಲ್ಲರಿಗೂ ಕೂಡಾ ಗೌರವಿಸುವುದು ಮತ್ತು ಎಲ್ಲರ ಒಳೀತು ಬಯಸುವುದು ನಮ್ಮ ಕರ್ತವ್ಯ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು.
ಬಿ ಹೆಚ್ ಎಸ್ ಹೈಯರ್ ಎಜುಕೇಷನ್ ಸೊಸೈಟಿ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ಇಲ್ಲಿರೋ ಎಲ್ಲಾ ವಿದ್ಯಾರ್ಥಿಗಳಿಗೂ ನಾನು ಶುಭಾಶಯ ಕೋರುತ್ತೇನೆ ಎಂದು ಕನ್ನಡದಲ್ಲಿಯೇ ಶುಭಾಶಯ ಹೇಳಿದರು.
ಇದುವರೆಗೂ 80 ಯೂನಿವರ್ಸಿಟಿಗಳಿಗೆ ನಾನು ಭೇಟಿ ನೀಡಿದ್ದೇನೆ. ಕೃಷಿ ನಮ್ಮ ದೇಶದ ಬೆನ್ನೆಲುಬು, ಈ ಹಿನ್ನೆಲೆ ರೈತರ ಸಂಕಷ್ಟವನ್ನು ಅರಿಯಬೇಕಿದೆ. ಕೃಷಿಯನ್ನು ನಾವು ಉತ್ತೇಜಿಸಬೇಕಿದೆ ಎಂದು ಸಲಹೆ ನೀಡಿದರು. ಸಿನಿಮಾ ಇಂಡಸ್ಟ್ರಿ ಸೇರಿ ಹಲವು ಕ್ಷೇತ್ರಗಳ ಜನರ ಜೊತೆ ನಾನು ಬೆರೆತು ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಇದರಲ್ಲಿ ಹಲವು ಬದಲಾವಣೆಗಳನ್ನು ತರಬೇಕಿದೆ. ಶಿಕ್ಷಣ, ಆರೋಗ್ಯ, ರಾಜಕೀಯ ಇವೆಲ್ಲವೂ ಅತ್ಯಂತ ಹೆಚ್ಚು ಮುಖ್ಯವಾದವು.
ಶಿಕ್ಷಣ ಎಂಬುದು ಒಂದು ಪರಿಣಾಮಕಾರಿ ಅಸ್ತ್ರ. ಹೀಗಾಗಿ ನಾವು ಶಿಕ್ಷಣವನ್ನು ಹೆಚ್ಚು ಅಭಿವೃದ್ಧಿಪಡಿಸಬೇಕು. ಶೇ.20ರಷ್ಟು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಕೇವಲ ಉದ್ಯೋಗಕ್ಕೆ ಮೀಸಲಿಲ್ಲ. ಅದು ಜನರ ಜ್ಞಾನವಾಗಿರಬೇಕು ಹಾಗೂ ದೇಶದ ಶಕ್ತಿಯಾಗಬೇಕು ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು. ನಮ್ಮ ಗುರುಕುಲದ ಶಿಕ್ಷಣ ಉತ್ತಮ ಗುಣಮಟ್ಟದ್ದಾಗಿದೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ತಮ್ಮ ಜೀವವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅಂಥವರು ಹುಟ್ಟಿದ ದೇಶ ನಮ್ಮದು, ನಾವು ನಮ್ಮ ಸಂಸ್ಕೃತಿ, ಕಲೆಯನ್ನು ಎಂದಿಗೂ ಮರೆಯಬಾರದು. ಶಿಕ್ಷಣ ಎಂದರೆ ಕೇವಲ ಪುಸ್ತಕದಲ್ಲಿ ಇರುವುದಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಘಂಟು ತಜ್ಞ ವೆಂಕಟಸುಬ್ಬಯ್ಯ, ಸಂಸದ ಪಿ ಸಿ ಮೋಹನ್, ತೇಜಸ್ವಿಸೂರ್ಯ, ಬಿ ಹೆಚ್ ಎಸ್ ಹೈಯರ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಜಿ ವಿ ವಿಶ್ವನಾಥ್ ಉಪಸ್ಥಿತರಿದ್ದರು.