ಬೆಂಗಳೂರು : ರಾಜ್ಯದಲ್ಲಿ ಶಾಲಾ ಶುಲ್ಕ ವಿಚಾರ ನ್ಯಾಯಾಲಯದ ಆವರಣದಲ್ಲಿತ್ತು. ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2020-21 ಅನ್ವಯವಾಗುವಂತೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರಿಂದ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪಡೆದ ಬೋಧನಾ ಶುಲ್ಕ, (TUTION FEES)ದಲ್ಲಿ ಶೇ. 70 ರಷ್ಟನ್ನು ಪಡೆಯಲು ಅನುಮತಿ ನೀಡಲಾಗಿರುವುದನ್ನು ಉಚ್ಚ ನ್ಯಾಯಾಲಯದ ಆದೇಶ ಪರಿಷ್ಕರಿಸಿ, ಬೋಧನಾ ಶುಲ್ಕದಲ್ಲಿ ಶೇ. 85ರಷ್ಟನ್ನ ಮಾತ್ರ ಪಡೆಯಲು ಅನುಮತಿ ನೀಡಲಾಗಿದೆ.
ಉಳಿದಂತೆ ಶಾಲಾ ಅಭಿವೃದ್ಧಿ ಶುಲ್ಕ, ಐಚ್ಛಿಕ ಶುಲ್ಕಗಳು ಸೇರಿದಂತೆ ಉಳಿದ ಯಾವುದೇ ಶುಲ್ಕ ಹಾಗೂ ಟ್ರಸ್ಟ್ ಸೊಸೈಟಿಗಳಿಗೆ ಸ್ವೀಕರಿಸದಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳನ್ನು ನಿರ್ಬಂಧಿಸಿ ಕೆಲ ಷರತ್ತುಗಳೊಂದಿಗೆ ಸರ್ಕಾರ ಹೊಸದಾಗಿ ಆದೇಶಿಸಿದೆ.
ಸರ್ಕಾರದ ಷರತ್ತುಗಳೇನು..?
1) ಈಗಾಗಲೇ ಪೂರ್ಣ ಶುಲ್ಕ ಪಾವತಿಸಿದಲ್ಲಿ ಹೆಚ್ಚುವರಿ ಶುಲ್ಕವನ್ನು ಪೋಷಕರಿಗೆ ಹಿಂತಿರುಗಿಸುವುದು ಅಥವಾ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಶುಲ್ಕ ಹೊಂದಾಣಿಕೆ ಮಾಡಿಕೊಳ್ಳುವುದು.
2) 2020-21ನೇ ಶೈಕ್ಷಣಿಕ ವರ್ಷದಲ್ಲಿ ಮೇಲೆ ನಿಗದಿಪಡಿಸಿದ ಶುಲ್ಕಕ್ಕಿಂತ ಕಡಿಮೆ ಮಾಡಲು ಆಡಳಿತ ಮಂಡಳಿಗಳು ಇಚ್ಚಿಸಿದಲ್ಲಿ ಸಂಪೂರ್ಣ ಸ್ವಾತಂತ್ರ ಹೊಂದಿರುತ್ತಾರೆಂದು ಹೇಳಲಾಗಿದೆ.
ಆದರೆ, ಇದೀಗ ಸರ್ಕಾರದ ಆದೇಶಕ್ಕೆ ಕ್ಯಾಮ್ಸ್ ವಿರೋಧ ವ್ಯಕ್ತಪಡಿಸಿದೆ. ಶಿಕ್ಷಣ ಇಲಾಖೆ ಮತ್ತೊಮ್ಮೆ ಯಡವಟ್ಟಿನ ಕೆಲಸ ಮಾಡಿದೆ ಅಂತಾ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಶುಲ್ಕ ಸಂಬಂಧಪಟ್ಟಂತೆ ಕೋರ್ಟ್ ಹೇಳಿರುವ ತೀರ್ಪು, ಶಾಲೆಯ ವಾರ್ಷಿಕ ಶುಲ್ಕದಲ್ಲಿ ಶೇ.15 ಕಡಿತ ಎಂಬುದನ್ನ ಇಂಗ್ಲಿಷ್‌ನಲ್ಲಿ ಸರಿಯಾಗಿ ಹಾಕಿ, ಕನ್ನಡದಲ್ಲಿ ಕೇವಲ ಮಾಸಿಕ ಶುಲ್ಕ ಅಂತಾ ನಮೂದಿಸಿದೆ.
ಇತರೆ ಯಾವುದೇ ಶುಲ್ಕವನ್ನ ಪಡಿಯಬಾರದು ಎಂಬ ಆದೇಶ ಹೊರಡಿಸಿ, ಶಾಲೆಗಳು ಹಾಗೂ ಪೋಷಕರ ನಡುವೆ ಜಗಳಕ್ಕೆ ಆಸ್ಪದ ಮಾಡಿಕೊಟ್ಟಿದೆ. ಜವಾಬ್ದಾರಿ ಇಲ್ಲದೇ ಯಡವಟ್ಟು ಮಾಡಿಕೊಂಡಿರುವ ಸರ್ಕಾರದ ನಡೆ ಒಪ್ಪುವಂತದಲ್ಲ. ಇದನ್ನ ತೀವ್ರವಾಗಿ ಖಂಡಿಸುತ್ತೇವೆ, ಕೋರ್ಟ್ ಮೊರೆ ಹೋಗುತ್ತೇವೆ, ಕೂಡಲೇ ಈ ಆದೇಶವನ್ನ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.