ನವದೆಹಲಿ/ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ಎರಡನೇ ಬಾರಿಗೆ ಸಮನ್ಸ್ ನೀಡಿದ್ದರಿಂದ ಮಧ್ಯಪ್ರದೇಶ ಉಜ್ಜಯಿನಿಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇರವಾಗಿ ದೆಹಲಿಗೆ ಆಗಮಿಸಿದ್ದಾರೆ. ಇಂದು ಅವರು ಇಡಿ ಮುಂದೆ ವಿಚಾರಣೆ ಎದುರಿಸಲಿದ್ದಾರೆ.
ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ವಿಚಾರಣೆಯ ಬಳಿಕ ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿದ ಆರೋಪದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಲು ಇಡಿ ಕೆಲ ದಿನಗಳ ಹಿಂದೆ ಸಮನ್ಸ್ ಜಾರಿ ಮಾಡಿತ್ತು.
ಪೂರ್ವ ನಿಗದಿತ ಕಾರ್ಯಕ್ರಮಗಳಿರುವ ಕಾರಣ 3 ವಾರಗಳ ಸಮಯ ಕೇಳಿದ್ದ ಡಿಕೆಶಿಗೆ ಮತ್ತೆ ಇಡಿ ತುರ್ತು ಸಮನ್ಸ್ ನೀಡಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷರು ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಬಳಿಕ ನೇರವಾಗಿ ದೆಹಲಿಗೆ ಆಗಮಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ವಿಚಾರಣೆಗೆ 3 ವಾರಗಳ ಸಮಯ ಕೇಳಿದ್ದೆ. ಆದರೆ ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿ ಮತ್ತೆ ಸಮನ್ಸ್ ನೀಡಿದ್ದಾರೆ. ಹೀಗಾಗಿ ನಾನು ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ಸನ್ನಿಧಿಯಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಸಾಂವಿಧಾನಿಕ ಸಂಸ್ಥೆಗಳಿಗೆ ಗೌರವ ನೀಡಿ, ವಿಚಾರಣೆ ಎದುರಿಸುವೆ ಎಂದು ಹೇಳಿದರು.
ಮೊದಲ ಸಮನ್ಸ್ ಜಾರಿ ಮಾಡಿದಾಗ ಪೂರ್ವ ನಿಗದಿತ ಕಾರ್ಯಕ್ರಮ ಕಾರಣ ಸಮಯಾವಕಾಶ ಕೇಳಿದ್ದೆ. ಅಲ್ಲದೇ, ಕೇಸ್ಗೆ ಉತ್ತರವೂ ನೀಡಿದ್ದೆ. ಆದರೆ, ಇಡಿ ಇದಕ್ಕೆ ತೃಪ್ತವಾಗದೇ ವಿಚಾರಣೆ ಎದುರಿಸಲು ಮತ್ತೆ ಕರೆದಿದೆ. ಪ್ರಕರಣದಲ್ಲಿ ಮುಚ್ಚಿಡಲು ಏನೂ ಇಲ್ಲ. ದತ್ತಿ ಕೆಲಸಕ್ಕಾಗಿ ಹಣ ನೀಡಿದ್ದೇವೆ. ಈ ಬಗ್ಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಡಿಕೆಶಿ ಹೇಳಿದರು.
ಓದಿ: ಸಿಎಂ ಆಗಿದ್ದ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಡುತ್ತಿರುವುದು ಶೋಚನೀಯ: ಸಂಸದ ಮುನಿಸ್ವಾಮಿ
ವಿಚಾರಣೆ ವೇಳೆ ಅಧಿಕಾರಿಗಳು ಕೆಲವು ದಾಖಲೆ ಕೇಳಿದ್ದು, ಅವುಗಳನ್ನು ಸಲ್ಲಿಸಿದ್ದೇನೆ. ಇನ್ನು ಕೆಲವು ದಾಖಲೆ ಕೇಳಿದ್ದು, ಅದನ್ನು ಮುಂದಿನ ಕೆಲವು ದಿನಗಳಲ್ಲಿ ಸಲ್ಲಿಸುತ್ತೇನೆ. ಚುನಾವಣೆ ಸಮಯದಲ್ಲಿ ಡಿ.ಕೆ. ಸಹೋದರರಿಗೆ ಈ ರೀತಿ ಒತ್ತಡ ಹಾಕಿ ಬಿಜೆಪಿ ಸೇರುವ ಒತ್ತಾಯ ಮಾಡಲಾಗುತ್ತಿದೆಯಾ ಎಂದು ಕೇಳಿದಾಗ, 'ಈಗ ಆ ವಿಚಾರ ಹೇಳಿಕೊಂಡು ಕುಳಿತರೆ ಸಮಯ ಸಾಲುವುದಿಲ್ಲ. ಈಗ ಆ ವಿಚಾರ ಬೇಡ. ನಾವು ಎಲ್ಲವನ್ನೂ ಎದುರಿಸಲು ಸಿದ್ಧ' ಎಂದು ಹೇಳಿದರು.
ವಿಚಾರಣೆ ಪೂರ್ಣಗೊಂಡಿರುವ ಹಿನ್ನೆಲೆ ಇಂದು ರಾತ್ರಿಯೇ ಡಿಕೆ ಶಿವಕುಮಾರ್ ರಾಜ್ಯಕ್ಕೆ ಹಿಂದಿರುಗುವ ಸಾಧ್ಯತೆ ಇದೆ. ಹೈಕಮಾಂಡ್ ನಾಯಕರು ಭೇಟಿಯಾಗುವ ಭರವಸೆ ನೀಡಿದರೆ ರಾತ್ರಿ ಕರ್ನಾಟಕ ಭವನದಲ್ಲಿಯೇ ತಂಗಿ, ನಾಳೆ ಬೆಳಿಗ್ಗೆ ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಿ ಹಿಂದಿರುಗಲಿದ್ದಾರೆ ಎಂಬ ಮಾಹಿತಿ ಇದೆ.