ಬೆಂಗಳೂರು: ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಬೆಂಗಳೂರಿನ ಪಿಜೆನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ಸೇರಿದ 8.26 ಕೋಟಿ ರೂಪಾಯಿ ಹಣವನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪಿಜೆನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಒಡಾಕ್ಲಾಸ್ ಆ್ಯಪ್ ಮೂಲಕ ಆನ್‌ಲೈನ್ ಶಿಕ್ಷಣ ಒದಗಿಸುತ್ತಿದೆ. ಇದು ಚೀನಾ ಮೂಲದ ಲಿಯು ಕ್ಯಾನ್ ಹಾಗೂ ಭಾರತದ ವೇದಾಂತ್ ಹಮಿರ್ವಾಸಿಯಾ ಅವರನ್ನು ತನ್ನ ನಿರ್ದೇಶಕರನ್ನಾಗಿ ಹೊಂದಿದ್ದು, ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿತ್ತು.
ಈ ಸಂಸ್ಥೆಯನ್ನು ಕ್ಯಾಮನ್ ದ್ವೀಪಗಳಿಂದಲೇ ಶೇಕಡಾ ನೂರರಷ್ಟು ಚೀನಾ ಮೂಲದ ವ್ಯಕ್ತಿಗಳು ನಿರ್ವಹಿಸುತ್ತಿದ್ದಾರೆ. ಜಾಹೀರಾತು ವೆಚ್ಚದ ಹೆಸರಿನಲ್ಲಿ ಕಂಪನಿಯ ಖಾತೆಯಿಂದ 82.72 ಕೋಟಿ ರೂಪಾಯಿ ಹಣ ಚೀನಾ ಮತ್ತು ಹಾಂಕಾಂಗ್ ಮೂಲದ ಖಾತೆಗಳಿಗೆ ವರ್ಗಾವಣೆಯಾಗಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ. ಈ ಬಗ್ಗೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಸೆಕ್ಷನ್ 37ಎ ಅಡಿಯಲ್ಲಿ ಹಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
ಏಪ್ರಿಲ್ನಲ್ಲಿ ನಡೆದಿತ್ತು ದಾಳಿ: ಇಡಿ ಇಡಿ ಅಧಿಕಾರಿಗಳು ಕಳೆದ ಏಪ್ರಿಲ್ನಲ್ಲಿ ಈ ಸಂಸ್ಥೆ ಮೇಲೆ ದಾಳಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಂಸ್ಥೆಯ ಎಲ್ಲ ವ್ಯವಹಾರಗಳು, ಹಣಕಾಸು ನಿರ್ಧಾರಗಳನ್ನು ಒಳಗೊಂಡಂತೆ ಪ್ರತಿಯೊಂದು ತೀರ್ಮಾನವನ್ನು ಚೀನಾದಲ್ಲಿ ಕುಳಿತಿರುವ ವ್ಯಕ್ತಿಗಳು ತೆಗೆದುಕೊಳ್ಳುತ್ತಿದ್ದಾರೆ. ಚೀನಾದ ನಿರ್ದೇಶಕ ಲಿಯು ಕ್ಯಾನ್ ಸೂಚನೆಯ ಮೇರೆಗೆ ಸಂಸ್ಥೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚದ ಹೆಸರಿನಲ್ಲಿ 82.72 ಕೋಟಿ ರೂ.ಗಳನ್ನು ಎರಡು ರಾಷ್ಟ್ರಗಳಿಗೆ ವರ್ಗಾವಣೆಗೊಂಡಿರುವುದನ್ನು ಪತ್ತೆ ಹಚ್ಚಲಾಗಿತ್ತು.
ಇದನ್ನೂ ಓದಿ: ಚೀನಾ ಸಾಲದ ಆ್ಯಪ್ ಕಂಪನಿಗಳಿಗೆ ಸೇರಿದ ₹106 ಕೋಟಿ ಆಸ್ತಿ ಜಪ್ತಿ ಮಾಡಿದ ಇ.ಡಿ
ಅಲ್ಲದೇ, ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನ್ನ ಕಡೆಯಿಂದ ಯಾವುದೇ ಸೇವಾ ಸ್ವೀಕೃತಿಯ ದಾಖಲೆಗಳು ಮತ್ತು ಹೇಳಿದ ವೆಚ್ಚಗಳಿಗೆ ಯಾವುದೇ ಜಾಹೀರಾತಿನ ಪುರಾವೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿತ್ತು. ಜೊತೆಗೆ ಲಿಯು ಕ್ಯಾನ್‌ನ ಸೂಚನೆಯಂತೆ ಹಣ ಪಾವತಿಸಲಾಗಿತ್ತು ಕಂಪನಿಯ ನಿರ್ದೇಶಕ ಮತ್ತು ಖಾತೆ ವ್ಯವಸ್ಥಾಪಕರು ತನಿಖೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರು. ಗೂಗಲ್ ಮತ್ತು ಫೇಸ್‌ಬುಕ್ ಮೂಲಕ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ ಎಂದು ಚೀನಾದ ನಿರ್ದೇಶಕರು ಹೇಳಿದ್ದರು ಎಂಬುವುದಾಗಿ ಸಂಸ್ಥೆಯ ಭಾರತೀಯ ನಿರ್ದೇಶಕ ವೇದಾಂತ ಹಮಿರ್ವಾಸಿಯಾ ಹೇಳಿಕೆ ನೀಡಿದ್ದರು ಎಂದು ಇಡಿ ಮಾಹಿತಿ ನೀಡಿದೆ.
ಐಡಿಎಫ್ಪಿಎಲ್ನ ₹9 ಕೋಟಿ ಜಪ್ತಿ: ಮತ್ತೊಂದೆಡೆ, ಪುಣೆ ಮೂಲದ ಐಸೆಡ್ ಡೆಸರ್ಟ್ಸ್ ಮತ್ತು ಫುಡ್ ಪಾರ್ಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (lced Desserts and Food Parlours India Pvt Ltd - IDFPL)ನ ಮಾಜಿ ನಿರ್ದೇಶಕರಿಂದ ಹಣ ದುರುಪಯೋಗದ ಪ್ರಕರಣದಲ್ಲಿ 9.77 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಕಾನೂನು ಸಲಹೆಗಾರನ ಬಂಧಿಸಿದ ಸಿಬಿಐ