ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ರಾಜ್ಯದ ಪ್ರಮುಖ ರಾಜಕಾರಣಿಗಳಿಗೆ ಸೇರಿದಂತೆ ಹಲವರಿಗೆ ಹಣ ನೀಡಿದ ಸಂಗತಿಯನ್ನ ಇಡಿ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಮಾಜಿ ಸಚಿವರಾದ ಜಮೀರ್ ಅಹಮ್ಮದ್ , ರೋಷನ್ ಬೇಗ್ ಸೇರಿದಂತೆ ಹಲವು ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳು ಅಧಿಕಾರಿಗಳ ಜೊತೆ ಮನ್ಸೂರ್ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಮೊದಲ ಮೂರು ದಿನದಲ್ಲಿ ಕೆಲವು ಮಾಹಿತಿಯನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಲೆಹಾಕಿದ್ದಾರೆ. ಇಡಿ ಅಧಿಕಾರಿಗಳ ವಿಚಾರಣೆಗೆ ಮನ್ಸೂರ್ ಅಲಿಖಾನ್ ನಿರೀಕ್ಷಿತ ರೀತಿಯಲ್ಲಿ ಸಹಕಾರ ನೀಡದೇ ಇರುವುದರಿಂದ ಮತ್ತೆ ಇಡಿ ಮೂರು ದಿನ ತನ್ನ ವಶಕ್ಕೆ ಕೋರ್ಟ್ ಅನುಮತಿ ಮೇರೆಗೆ ಪಡೆದಿದೆ.
ಆರೋಪಿ ಮನ್ಸೂರ್ ಅಲಿಖಾನ್ ವಿಡಿಯೋದಲ್ಲಿ ಸಾರ್ವಜನಿಕವಾಗಿ ಆರೋಪಿಸಿದಂತೆ ರಾಜಕಾರಣಿಗಳು, ಗಣ್ಯರು ಹಾಗೂ ಅಧಿಕಾರಿಗಳಿಗೆ ಹಣ ನೀಡಿರುವುದು ಮತ್ತು ಸಾರ್ವಜನಿಕರಿಂದ ಅನಧಿಕೃತವಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದರ ಬಗ್ಗೆ ಮಾಹಿತಿಯನ್ನ ಇಡಿ ಸಂಗ್ರಹಿಸುತ್ತಿದೆ.