ಬೆಂಗಳೂರು: ದಿನೇ ದಿನೆ ಸೋಂಕು ಉಲ್ಬಣಗೊಳ್ತಿದ್ದು ಈ ನಿಟ್ಟಿನಲ್ಲಿ ರಾಜಾಜಿನಗರ ಕ್ಷೇತ್ರದ ಕೋವಿಡ್ ನಿಯಂತ್ರಣ ಕ್ರಮಗಳು ಪರಿಸ್ಥಿತಿ ಕುರಿತು ಸಚಿವ ಸುರೇಶ್ ಕುಮಾರ್ ಅವಲೋಕನ ಸಭೆ ನಡೆಸಿ ತುರ್ತು ಕ್ರಮಗಳಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಿಹ್ನೆ ಇರುವ ಸೋಂಕಿತರಿಗೆ ಆಸ್ಪತ್ರೆಗಳಿಗೆ ಸೇರಿಸುವುದು, ಹೋಂ ಐಸೋಲೇಶನ್ನಲ್ಲಿರುವ ಸೋಂಕಿತರಿಗೆ ಔಷಧ ಒದಗಿಸುವುದು, ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವುದೂ ಸೇರಿದಂತೆ ಈ ಸಂಬಂಧ ಉದ್ಭವವಾಗುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಬೇಕೆಂದು ನಿರ್ದೇಶಿಸಿದ ಸಚಿವರು, ಪ್ರತಿಯೊಂದು ಕಾರ್ಯಕ್ಕೂ ಓರ್ವ ಅಧಿಕಾರಿಯನ್ನು ನಿಯೋಜಿಸಲು ಸೂಚಿಸಿದರು.
ಪೋರ್ಟಬಲ್ ಆಕ್ಸಿಜನ್ ಯೂನಿಟ್ಗಳನ್ನು ಹೊಂದುವುದು, ಪ್ರತಿಯೊಂದು ಹೋಂ ಐಸೋಲೇಶನ್ನಲ್ಲಿರುವ ಕುಟುಂಬವನ್ನು ಪ್ರತಿದಿನ ಸಂಪರ್ಕಿಸಿ, ಅವರ ಯೋಗಕ್ಷೇಮ ವಿಚಾರಿಸಲು ವ್ಯವಸ್ಥೆಯನ್ನು ನಿರ್ವಹಿಸುವುದು, ಮೇ ಒಂದರಿಂದ ಹದಿನೆಂಟು ವರ್ಷಗಳ ಮೇಲಿರುವ ಪ್ರತಿ ನಾಗರೀಕರಿಗೆ ವ್ಯಾಕ್ಸಿನೇಷನ್ ಹಾಕಲು ಬೇಕಾದ ಸಕಲ ಸಿದ್ಧತೆ ನಡೆಸಲು ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ವಲಯದ ಜಂಟಿ ಆಯುಕ್ತರು, ಕ್ಷೇತ್ರದ ಆರೋಗ್ಯಾಧಿಕಾರಿ, ಬಿಬಿಎಂಪಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸ್ವಯಂಸೇವಕರು ಭಾಗವಹಿಸಿದ್ದರು.