ಬೆಂಗಳೂರು: ಸರ್ಕಾರದಿಂದ ವಿಶೇಷಚೇತನರಿಗೆ ನೀಡಲಾಗುವ ಮನೆಗಳಲ್ಲಿ ಖಾಸಗಿ ವ್ಯಕ್ತಿಗಳು ದರ್ಬಾರ್ ಮಾಡುತ್ತಿದ್ದಾರೆ. ಫಲಾನುಭವಿಗಳು ತಮಗೆ ಸಿಗಬೇಕಿರುವ ಸೂರಿಗಾಗಿ ನಿತ್ಯ ಕಚೇರಿಗೆ ಅಲೆಯುವಂತಾಗಿದೆ.
ಸರ್ಕಾರ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ಅಡಿ ವಿಕಲಚೇತನರಿಗೆ ಹಾಗೂ ಬಡವರಿಗೆ ವಿತರಿಸಿರುವ ಮನೆಗಳು ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ವಿಶೇಷಚೇತನರಾದ ಆನಂದ್ ಎಂಬುವರು ಕೂಡಾ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದಿಂದ ಲಗ್ಗೆರೆ ಸರ್ವೇ ನಂ.11 ಮತ್ತು ಮತ್ತು 12ರಲ್ಲಿ ನರ್ಮ್ ಬಿಎಸ್ಯುಪಿ ಯೋಜನೆಯಡಿ ನಿರ್ಮಿಸಿರುವ ಮನೆ ನೀಡಲಾಗಿತ್ತು.
ಆದರೆ, ಖಾಸಗಿ ವ್ಯಕ್ತಿಗಳು ಅಲ್ಲಿ ವಾಸವಾಗಿದ್ದು, ಬಿಟ್ಟುಕೊಡುವಂತೆ ಮನವಿ ಮಾಡಿದರೆ ಹಲ್ಲೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆಯಲ್ಲಿ ದೂರು ದಾಖಲಿಸಿದ್ದರೂ ಕೂಡ ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುತ್ತಾರೆ ಆನಂದ.
ಕೊಳಚೆ ನಿರ್ಮೂಲನ ಮಂಡಳಿ ಆಯುಕ್ತ ರುದ್ರಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದಾಗ, ವಿಕಲಚೇತನ ಕೋಟಾದಡಿ ಮನೆಯನ್ನು ನೀಡಲಾಗಿದೆ. ಅತಿಕ್ರಮಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.