ಬೆಂಗಳೂರು: ಬೆಸ್ಕಾಂನಲ್ಲಿ ಕಿರಿಯ ಸಹಾಯಕನ ಹುದ್ದೆಗೆ ನೇಮಕವಾಗಿರುವಂತೆ ನಕಲಿ ನೇಮಕಾತಿ ಪತ್ರ ಸಲ್ಲಿಸಿದ್ದ ವ್ಯಕ್ತಿ ಹಾಗೂ ಆತನಿಗೆ ನಕಲಿ ಪತ್ರ ಮಾಡಿಕೊಟ್ಟಿವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ವೈಭವ್ ವೆಂಕಟೇಶ್, ಶಿವಪ್ರಸಾದ್, ವಿಜಯ್ ಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ್ ಎಂಬಾತನ ವಿರುದ್ಧ ಹೈಗ್ರೌಂಡ್ಸ್ ಪೊಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮೇ 22ರಂದು ಮಧ್ಯಾಹ್ನ ಕ್ರೆಸೆಂಟ್ ರಸ್ತೆಯ ಬೆಸ್ಕಾಂ ಕಚೇರಿಗೆ ಬಂದಿದ್ದ ವೈಭವ್ ವೆಂಕಟೇಶ್, ಬೆಸ್ಕಾಂ ಕಿರಿಯ ಸಹಾಯಕ ಹುದ್ದೆಗೆ ನೇಮಕವಾಗಿರುವ ಪತ್ರ ಸಲ್ಲಿಸಿದ್ದಾನೆ. ಪತ್ರವನ್ನು ಕಂಡ ಕಾರ್ಯನಿರ್ವಾಹಕ ಇಂಜಿನಿಯರ್, ಅಧೀಕ್ಷಕ ಇಂಜಿಯರ್ ಹೆಸರಿನ ನಕಲಿ ಸೀಲ್ ಮತ್ತು ನಕಲಿ ಸಹಿ ಇರುವುದನ್ನು ಗಮನಿಸಿದ್ದಾರೆ. ಅಧೀಕ್ಷಕ ಇಂಜಿನಿಯರ್ ಮೂಲಕವೇ ಪರಿಶೀಲಿಸಿದಾಗ ಪತ್ರ ನಕಲಿ ಎಂಬುದು ಬೆಳಕಿಗೆ ಬಂದಿತ್ತು. ವೈಭವ್ ವೆಂಕಟೇಶ್ ಬಳಿ ಪತ್ರದ ಬಗ್ಗೆ ವಿಚಾರಿಸಿದಾಗ, ಆರೋಪಿಗಳಾದ ಶಿವಪ್ರಸಾದ್, ವಿಜಯ್ ಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ್ 20 ಲಕ್ಷ ಪಡೆದು ನಕಲಿ ನೇಮಕಾತಿ ಪತ್ರ ನೀಡಿರುವುದು ಬಯಲಾಗಿತ್ತು.
ನಕಲಿ ನೇಮಕಾತಿ ಪತ್ರ ತಂದಿದ್ದ ವೈಭವ್ ವೆಂಕಟೇಶ್ ಹಾಗೂ ಶಿವಪ್ರಸಾದ್, ವಿಜಯ್ ಕುಮಾರ್, ಪ್ರದೀಪ್ ಹಾಗೂ ಪುರುಷೋತ್ತಮ್ ವಿರುದ್ಧ ಬೆಸ್ಕಾಂ ಅಧಿಕಾರಿಗಳು ಹೈಗ್ರೌಂಡ್ಸ್ ಠಾಣೆಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಕಲಿ IAS ಅಧಿಕಾರಿ ಬಂಧನ: ತಾನೊಬ್ಬ ಐಎಎಸ್ ಅಧಿಕಾರಿ ಹಾಗೂ ದೆಹಲಿಯ ಪ್ರಧಾನಿ ಕಾರ್ಯಾಲಯದ ಉಪ ಕಾರ್ಯದರ್ಶಿ ಎಂದು ಹೇಳಿಕೊಂಡು ಪುಣೆಯಲ್ಲಿ ಸುತ್ತಾಡುತ್ತಿದ್ದ ನಕಲಿ ಐಎಸ್ ಅಧಿಕಾರಿಯನ್ನು ಪೊಲೀಸರು ಪುಣೆಯಲ್ಲಿ ಬಂಧಿಸಿರುವ ಘಟನೆ ಮೇ 31 ಕ್ಕೆ ನಡೆದಿದೆ. ಆರೋಪಿಯನ್ನು ವಾಸುದೇವ್ ನಿವೃತ್ತಿ ತಾಯ್ಡೆ (54) ಎಂದು ಗುರುತಿಸಲಾಗಿದ್ದು, ಆರೋಪಿಯ ವಿರುದ್ಧ ಚತುರಶೃಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಫ್ಲಾಟ್ ನಂ 336, ರಣವರ್ ರೋಹೌಸ್ ತಾಲೇಗಾಂವ್ ದಭಾಡೆ ನಿವಾಸಿಯಾಗಿದ್ದಾನೆ. ಆರೋಪಿ ಡಾ. ಡಾ ವಿನಯ್ ಡಿಯೋ ಅವರು ತನ್ನನ್ನು ದೆಹಲಿಯ ಪ್ರಧಾನಿ ಕಾರ್ಯಾಲಯದ ಕಾರ್ಯದರ್ಶಿಯಾಗಿ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಮತ್ತು "ಗುಪ್ತಚರಕ್ಕೆ ಸಂಬಂಧಿಸಿದ ಕೆಲಸ" ದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳೊಂದಿಗೆ ಹೇಳಿಕೊಂಡಿದ್ದ.
ಮಹಾರಾಷ್ಟ್ರದ ಪುಣೆಯ ಬನೇರ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಜಮ್ಮು ಮತ್ತು ಕಾಶ್ಮೀರಕ್ಕೆ ನಿಧಿ ಸಂಗ್ರಹಿಸುವ ಸಲುವಾಗಿ ಪುಣೆಯ ಔಂಧ್ ಪ್ರದೇಶದಲ್ಲಿ 'ಬಾರ್ಡರ್ ಲೆಸ್ ವರ್ಲ್ಡ್ ಫೌಂಡೇಶನ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನು.ಈ ಕಾರ್ಯಕ್ರಮದಲ್ಲಿ ಆರೋಪಿ ತಾನು ಪಿಎಂಒ ಕಚೇರಿಯಲ್ಲಿ ಕೆಲಸ ಮಾಡುವ ಐಎಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.
ಆದಾಗ್ಯೂ, ವೀರೇನ್ ಶಾ, ಸುಹಾಸ್ ಕದಂ, ಪಿಕೆ ಗುಪ್ತಾ ಸೇರಿದಂತೆ ಸಂಘಟಕರು ಮತ್ತು ಇತರ ಟ್ರಸ್ಟಿಗಳು ಮತ್ತು ಸದಸ್ಯರು ಈತನ ವರ್ತನೆಯಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚತುರಶೃಂಗಿ ಪೊಲೀಸ್ ಠಾಣೆಯ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮಗಳನ್ನು ಹೀರೋಯಿನ್ ಮಾಡಲು ಅಡ್ಡ ದಾರಿ: ದೈಹಿಕವಾಗಿ ಬೇಗ ಬೆಳೆಯಲಿ ಎಂದು ಪುತ್ರಿಗೆ ಡ್ರಗ್ಸ್ ನೀಡಿದ ತಾಯಿ!