ಬೆಂಗಳೂರು: ಅನ್ಲಾಕ್ ಆದ ಬಳಿಕ ಸದ್ಯ ವಾಹನ ಸವಾರರ ಓಡಾಟ ಹೆಚ್ಚಾಗಿದ್ದು, ಟ್ರಾಫಿಕ್ ಪೊಲೀಸರು ಕೂಡ ಎಲ್ಲೆಡೆ ಅಲರ್ಟ್ ಆಗಿದ್ದಾರೆ. ಮುಂಜಾಗೃತ ಕ್ರಮ ಕೈಗೊಂಡು ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ಹಾಕ್ತಿದ್ದಾರೆ.
ಇನ್ನು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಒಂದೇ ಯಂತ್ರವನ್ನು ಬಳಸಿ ನಡೆಸಲಾಗುತ್ತದೆ. ಇದರಿಂದ ಕೊರೊನಾ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ತಾತ್ಕಾಲಿಕವಾಗಿ ತಪಾಸಣೆಗೆ ಸರ್ಕಾರವು ತಡೆ ನೀಡಿದೆ. ಆದ್ರೆ ವೈದ್ಯಕೀಯ ಪರೀಕ್ಷೆ ನಡೆಸಿ ದಂಡ ವಿಧಿಸಲು ಅನುಮತಿ ಇದ್ದು, ಕುಡಿದು ವಾಹನ ಚಾಲನೆ ಮಾಡಿದ್ರೇ ರಕ್ತ ಮಾದರಿ ಪರೀಕ್ಷೆ ನಡೆಸಿ ದಂಡ ಹಾಕ್ತಿದ್ದಾರೆ.
ಕುಡಿದು ವಾಹನ ಚಾಲನೆ ಮಾಡಿದರೆ ಚೆಕ್ ಮಾಡಲ್ಲ ಎಂದು ಕೆಲವರು ರಾಜಾರೋಷಾವಾಗಿ ಓಡಾಡುತ್ತಿದ್ದಾರೆ. ಆದರೆ ಈ ಕುರಿತು ಮಾಹಿತಿ ಗೊತ್ತಾದ್ರೆ ರಕ್ತ ಮಾದರಿ ಪರೀಕ್ಷೆ ನಡೆಸಿ ಫೈನ್ ಹಾಕ್ತಾರೆ. ಹಾಗೂ ಕೊರೊನಾ ಪ್ರೋಟೋಕಾಲ್ ನಿಯಮ ಪ್ರಕಾರ ಚೆಕ್ಕಿಂಗ್ ಮಾಡಲಾಗುತ್ತದೆ. ಮತ್ತು ಕಚೇರಿಯಲ್ಲಿ ಕುಳಿತು, ಸಿಗ್ನಲ್ ಬಳಿ ಹಾಗೂ ರಸ್ತೆಯಲ್ಲಿ ಓಡಾಟ ಮಾಡುವವರ ಚಲನವಲನಗಳನ್ನು ವೀಕ್ಷಣೆ ಮಾಡಿ ದಂಡ ಹಾಕ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕಳೆದ ವರ್ಷ 40,602 ಹಾಗೂ ಈ ವರ್ಷದಲ್ಲಿ 5,277 ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದೆ.
ಇನ್ನು ಶಿವಮೊಗ್ಗದಲ್ಲಿ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ, ಮೊದಲಿಗೆ ಹೋಲಿಸಿದರೆ ಶೇಕಾಡವಾರು ಕಡಿಮೆಯಾಗಿದೆ. ಕಳೆದ ವರ್ಷ ಸಾವಿರಕ್ಕೂ ಅಧಿಕ ಡ್ರಕ್ ಆ್ಯಂಡ್ ಡ್ರೈವ್ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ವರ್ಷ ಕೇವಲ 154 ಪ್ರಕರಣಗಳನ್ನು ದಾಖಲಿಸಲಾಗಿದೆ. ಹಾಗೂ 5. 56 ಲಕ್ಷ ರೂ. ದಂಡ ಪಾವತಿಸಿ ಕೊಂಡಿದೆ. ಕೊರೊನಾ ಭೀತಿಯಿಂದ ಮಿಷನ್ನಲ್ಲಿ ಪರೀಕ್ಷೆ ನಡೆಸುವುದನ್ನು ನಿಲ್ಲಿಸಿದೆ. ಇದರಿಂದ ಕುಡಿದು ವಾಹನ ಚಲಾಯಿಸುವವರರ ಸಂಖ್ಯೆ ಹೆಚ್ಚಾಗಿದ್ದು, ಅನಿವಾರ್ಯವಾಗಿ ಹಿಂದೆ ನಡೆಸುತ್ತಿದ್ದ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಇನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದ್ದರಿಂದ, ಪೊಲೀಸರು ತಾತ್ಕಾಲಿಕವಾಗಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆಯನ್ನು ನಿಲ್ಲಿಸಿದ್ದಾರೆ. ಆದ್ರೆ ಕೆಲವೆಡೆ ಮಷಿನ್ನಿಂದ ತಪಾಸಣೆ ನಡೆಸುತ್ತಿರುವ ದೃಶ್ಯ ಈಟಿವಿಗೆ ಲಭ್ಯವಾಗಿವೆ.
ಇನ್ನು ಕುಡಿದು ವಾಹನ ಚಾಲನೆ ಮಾಡುವವರಿಗೆ ಸ್ಥಳದಲ್ಲಿಯೇ ದಂಡ ಹಾಕಲಾಗುತ್ತಿಲ್ಲ. ವೈದ್ಯಕೀಯ ಪರೀಕ್ಷೆ ಮಾಡಿಸಿ ನಂತರ ಕೇಸ್ ದಾಖಲಿಸಲಾಗುತ್ತಿದೆ. ಒಂದು ವೇಳೆ ಪೊಲೀಸರು ಪರೀಕ್ಷೆ ನಡೆಸುತ್ತಿಲ್ಲ ಎಂದು ನಿರ್ಲಕ್ಷ್ಯ ತೋರಿದರೆ, ದಂಡ ಬೀಳುವುದು ಗ್ಯಾರಂಟಿ. ಅದೇನೇ ಇರಲಿ ಡ್ರಂಕ್ ಅಂಡ್ ಡ್ರೈವ್ ಕೊರೋನಾಗಿಂತಲೂ ಅಪಾಯಕಾರಿ ಎಂಬುದನ್ನು ಜನರು ಮರೆಯಬಾರದು.