ಬೆಂಗಳೂರು: ಮಾರಕ ವೈರಸ್ ಕೊರೊನಾ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಸರ್ಕಾರ ಹಲವು ಮುಂಜಾಗೃತಾ ಕ್ರಮ ಕೈಗೊಂಡರು ಯಾವುದೇ ಪ್ರಯೋಜನವಾಗ್ತಿಲ್ಲ. ಅದರೆ, ಈ ಮಹಾಮಾರಿ ವಿರುದ್ಧ ಹೋರಾಡಲು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನವೀನ ರೀತಿಯ ಹೋರಾಟ ಆರಂಭವಾಗಿದೆ.
ವ್ಯಾಪಕವಾಗಿ ಹರಡುತ್ತಿರುವ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಡ್ರೋಣ್ ಮೂಲಕ ಸಾವಯವ ಔಷಧವನ್ನು ಸಿಂಪಡಣೆ ಮಾಡುವ ಕಾರ್ಯಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಚಾಲನೆ ನೀಡಿದ್ದಾರೆ.
ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಇಡೀ ಕ್ಷೇತ್ರದಾದ್ಯಂತ ಸಾವಯವ ಔಷಧವನ್ನು ಡ್ರೋಣ್ ಮೂಲಕ ಸಿಂಪಡಣೆ ಮಾಡಲಾಗುವುದು. ಇದರಿಂದ ಕೋವಿಡ್ ಹರಡುವುದನ್ನು ತಡೆಯಬಹುದು ಎಂದು ಡಿಸಿಎಂ ತಿಳಿಸಿದ್ದಾರೆ. ಟೀಮ್ ದಕ್ಷ ಮತ್ತು ಸುಗಾರ್ಧನ ಸಂಸ್ಥೆ ಜಂಟಿಯಾಗಿ ಡ್ರೋಣ್‌ಗಳನ್ನು ಒದಗಿಸಿದ್ದು, ಔಷಧ ಸಿಂಪಡಣೆಗೆ ನೆರವಾಗಿವೆ.
ನಾಳೆ ಇಡೀ ದಿನ ಮಲ್ಲೇಶ್ವರ ಕ್ಷೇತ್ರದ ಜನಸಂದಣಿ ಹೆಚ್ಚು ಇರುವ ಪ್ರದೇಶದಲ್ಲಿ ಸಿಂಪಡಣೆ ನಡೆಯಲಿದೆ. ಇದು ಸೋಂಕಿನ ಕಾಯಿಲೆ ಆಗಿರುವುದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ತಾಂತ್ರಿಕವಾಗಿ ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಾವು ಮುಕ್ತವಾಗಿ ಪ್ರಯತ್ನಿಸಬೇಕು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.