ಬೆಂಗಳೂರು: ಇಂದು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಸಿಎಂ ಯಡಿಯೂರಪ್ಪ ರಾಜ್ಯಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.
ಲಸಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಮಾತಾನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನನಗೆ ಲಸಿಕೆ ಪಡೆಯಲು ಹೇಳಿದರೆ ಖಂಡಿತ ನಾನು ಲಸಿಕೆ ಪಡೆಯುತ್ತೇನೆ. ಆ ಮೂಲಕ ಸಾಮಾನ್ಯ ಜನರಲ್ಲೂ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಮೋದಿಯವರು ಕೊರೊನಾ ಲಸಿಕೆ ಮಾಹಿತಿಯನ್ನು ನೀಡಿದ್ದಾರೆ. 243 ಕಡೆ ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲಾಗುತ್ತದೆ. ಪ್ರತಿ ನಿತ್ಯ ಈ ಸಂಖ್ಯೆ ಹೆಚ್ಚಳ ಆಗಲಿದೆ. ನಾಗರತ್ನ ಎಂಬ ಮಹಿಳೆಗೆ ಈಗಷ್ಟೇ ಲಸಿಕೆ ಕೊಡಲಾಗಿದೆ. ಡಾ.ಸುದರ್ಶನ್ ಬಲ್ಲಾಳ್ ಸೇರಿದಂತೆ ಹಲವು ಗಣ್ಯರು ಲಸಿಕೆ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲೇ ತಯಾರಾದ ಲಸಿಕೆ, ವಿಶ್ವದ ಗಮನ ಸೆಳೆಯುವ ರೀತಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಆಗಿದೆ. ದೇಶದ ಎಲ್ಲ ಜನರಿಗೂ ವಿಶೇಷ ಪರಿಶ್ರಮದ ಬಗ್ಗೆ ಮಾಹಿತಿ ಇದೆ. ದೇಶ-ರಾಜ್ಯದ ಜನರ ಪರವಾಗಿ ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ: ಭಾರತದ ಕೊರಾನಾ ವ್ಯಾಕ್ಸಿನ್ ಪ್ರಪಂಚದಲ್ಲಿ ಕ್ರಾಂತಿ ಮಾಡಲಿದೆ: ಡಿಸಿಎಂ ಲಕ್ಷ್ಮಣ್ ಸವದಿ
ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ಗಳು ಅತ್ಯಂತ ಯಶಸ್ವಿ: ಪ್ರಹ್ಲಾದ ಜೋಶಿ
ಬಳಿಕ ಮಾತಾನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಯಡಿಯೂರಪ್ಪ ಹಾಗೂ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಪ್ರಧಾನಿ ನೇತೃತ್ವದಲ್ಲಿ ಲಸಿಕೆ ಉದ್ಘಾಟನೆ ಆಗಿದೆ. ರಾಜ್ಯದಲ್ಲೂ ಸಿಎಂ ಮಾರ್ಗದರ್ಶನದಲ್ಲಿ ವ್ಯವಸ್ಥೆ ಅಚ್ಚುಕಟ್ಟಾಗಿ ಆಗಿದೆ. 243 ಕ್ಕೂ ಹೆಚ್ಚು ಕಡೆ ವ್ಯಾಕ್ಸಿನೇಷನ್ ಕೊಡುವ ವ್ಯವಸ್ಥೆ ಆಗಿದ್ದು, ಇದರ ಬಗ್ಗೆ ಕಾಲಕಾಲಕ್ಕೆ ಮಾರ್ಗದರ್ಶನ ಮಾಡಲಾಗಿದೆ ಎಂದರು.
ಭಾರತದ ವಿಜ್ಞಾನಿಗಳು ಪಿಎಂ ಪ್ರೋತ್ಸಾಹದ ಮೇರೆಗೆ ಜಗತ್ತಿನ ಅತಿ ದೊಡ್ಡ ವ್ಯಾಕ್ಸಿನ್ ತಯಾರಿಸಿದ್ದಾರೆ. ಜಗತ್ತು ನಮ್ಮನ್ನ ನಂಬುತ್ತಿದೆ. ಬೇರೆ ದೇಶಗಳಲ್ಲಿ ಜನರೇ ಮೂರು ಕೋಟಿ ಇಲ್ಲ, ನಮ್ಮಲ್ಲಿ ಮೊದಲ ದಿನವೇ 3 ಕೋಟಿ ಜನರಿಗೆ ವ್ಯಾಕ್ಸಿನ್ ಕೊಡಲಾಗುತ್ತಿದೆ. ಜನರ ಮನಸ್ಸಿನಲ್ಲಿ ಗೊಂದಲ, ಭಯ ಹುಟ್ಟಿಸಬಾರದು. ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ಗಳು ಅತ್ಯಂತ ಯಶಸ್ವಿಯಾಗಿವೆ. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ನುರಿತ ತಜ್ಞರು ಇವತ್ತು ಲಸಿಕೆ ಪಡೆದಿದ್ದಾರೆ. ಇದನ್ನ ತಿರುಚುವ ಪ್ರಯತ್ನವಾಗಲಿ, ಲಸಿಕೆ ವಿಷಯದಲ್ಲಿ ರಾಜಕೀಯವಾಗಲಿ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬಂದ ತಪ್ಪು ಮಾಹಿತಿ ನಂಬಬೇಡಿ: ಸಚಿವ ಸುಧಾಕರ್
ಬಳಿಕ ಮಾತಾನಾಡಿದ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್, ಪ್ರತಿಯೊಂದು ಆಸ್ಪತ್ರೆಯಲ್ಲೂ 100 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಒಟ್ಟಾರೆ 20 ಸಾವಿರ ಜನರಿಗೆ ಮೊದಲ ದಿನ ಲಸಿಕೆ ನೀಡಲಾಗುತ್ತಿದೆ. ಗ್ರೂಪ್ ಡಿ, ಬಿಡದಿ ನಿವಾಸಿಗಳಿಗೆ ಮೊದಲ ಲಸಿಕೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ತಪ್ಪು ಮಾಹಿತಿ ನಂಬಬೇಡಿ. ಈ ಲಸಿಕೆ ಅತ್ಯಂತ ಸಮರ್ಪಕ ಎಂದು ತಿಳಿದು ಲಸಿಕೆ ಪಡೆಯುತ್ತಿದ್ದಾರೆ. ಭಾರತೀಯ ಲಸಿಕೆಯನ್ನ ರೆಕಾರ್ಡ್ ಟೈಮ್ ಎಂಬಂತೆ ನೀಡಲಾಗಿದೆ. ಪ್ರಧಾನ ಮಂತ್ರಿಗಳ ಇಚ್ಛಾ ಶಕ್ತಿಯಿಂದ ಈ ಕೆಲಸಗಳು ಆಗಿವೆ. ಸಂಶೋಧಕರು ಹಾಗೂ ಸಂಸ್ಥೆಗೆ ನಾವೆಲ್ಲ ಅಭಾರಿಗಳಾಗಿ ಇರುತ್ತೇವೆ. ಇನ್ನು ಸಣ್ಣ ಅಡ್ಡ ಪರಿಣಾಮ ಇದ್ದಾಗ ಆತಂಕವೇ ಬೇಡ. ಕ್ಲಿನಿಕಲ್ ಟ್ರಯಲ್ಸ್ ಆಗಿದೆ ಎಂದು ತಿಳಿಸಿದರು.
ಲಸಿಕೆ ಪಡೆದ ಆಸ್ಪತ್ರೆ ಸಿಬ್ಬಂದಿ: ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯಿಂದ ಹಿಡಿದು ಪ್ರತಿಷ್ಠಿತ ಆಸ್ಪತ್ರೆಯ ತಜ್ಞ ವೈದ್ಯರವರೆಗೂ ಲಸಿಕೆ ಪಡೆದು ವಿಶ್ವಾಸ ಮೂಡಿಸಿದರು. ಮಣಿಪಾಲ್ ಆಸ್ಪತ್ರೆಯ ಚೇರ್ಮನ್ ಹಾಗೂ ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯರಾಗಿರುವ ಡಾ.ಸುದರ್ಶನ್ ಬಲ್ಲಾಳ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಸುದರ್ಶನ್ ಎಂ.ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ಪಡೆದರು. ನಿಮಾನ್ಸ್ನಲ್ಲಿ ಟಾಸ್ಕ್ಫೋರ್ಸ್ ಸದಸ್ಯ ಡಾ.ರವಿ, ಕೆಸಿ ಜನರಲ್ ಆಸ್ಪತ್ರೆಯ ನೊಡಲ್ ಆಫೀಸರ್ ಲಕ್ಷ್ಮಿಪತಿ ಲಸಿಕೆ ಪಡೆದರು.