ದೇವನಹಳ್ಳಿ(ಬೆಂ.ಗ್ರಾಮಂತರ): ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿ ಎರಡು ಏರ್‌ಪೋರ್ಟ್‌ಗಳಲ್ಲಿ 13 ಕೋಟಿ ಮೌಲ್ಯದ ವಜ್ರ ಹಾಗೂ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ. ದುಬೈಗೆ ಹೊರಟಿದ್ದ ನಾಲ್ವರು ಪ್ರಯಾಣಿಕರ ತಪಾಸಣೆ ವೇಳೆ ಕೋಟ್ಯಾಂತರ ಮೌಲ್ಯದ ವಜ್ರ ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ಬೆಂಗಳೂರು ಹಾಗೂ ಹೈದರಾಬಾದ್ ಏರ್‌ಪೋರ್ಟ್‌ನಿಂದ ನಾಲ್ವರು ಪ್ರಯಾಣಿಕರು ದುಬೈಗೆ ಹೊರಟಿದ್ದರು. ಪ್ರಯಾಣಿಕರ ಬಳಿ ಸ್ವಾಭಾವಿಕವಾಗಿ ಹಾಗೂ ಲ್ಯಾಬ್ನಲ್ಲಿ ತಯಾರಿಸಿದ ವಜ್ರಗಳು ಪತ್ತೆಯಾಗಿದೆ. ಬೆಂಗಳೂರಲ್ಲಿ 7.77 ಕೋಟಿ ಮೌಲ್ಯದ 8,053 ಕ್ಯಾರೆಟ್ ತೂಕದ ವಜ್ರಗಳು ಹಾಗೂ 4.62 ಲಕ್ಷ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಹೈದರಾಬಾದ್‌ನಲ್ಲಿ 6.03 ಕೋಟಿ ಮೌಲ್ಯದ 5,569 ಕ್ಯಾರೆಟ್ ತೂಕದ ವಜ್ರಗಳು ಹಾಗೂ 9.83 ಲಕ್ಷ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
ಆರೋಪಿಗಳು ಚಾಕೊಲೇಟ್ ಪ್ಯಾಕೆಟ್‌ಗಳಲ್ಲಿ ಸೀಲ್ ಮಾಡಿ ವಜ್ರಗಳ ಸಾಗಾಟ ಮಾಡುತ್ತಿದ್ದರು. ಪ್ರಯಾಣಿಕರನ್ನು ವಶಕ್ಕೆ ಪಡೆದು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ: ಗುದನಾಳದಲ್ಲಿ ಅಡಗಿಸಿ ಅಕ್ರಮವಾಗಿ 50 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಅಂತರಾಷ್ಟೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಜನವರಿ 12 ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳಾದ IX816 ಮತ್ತು IX814 ಮೂಲಕ ಅಬುಧಾಬಿ ಮತ್ತು ದುಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಬ್ಬರು ಗುದನಾಳದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಅವರನ್ನು ಪರಿಶೀಲಿಸಿದಾಗ ಗುದನಾಳದಲ್ಲಿ ಅಂಡಕಾರದ ವಸ್ತುವಿನೊಂದಿಗೆ ಮತ್ತು ಬ್ಯಾಗ್ನಲ್ಲಿ ಚಾಕೊಲೇಟ್ನೊಂದಿಗೆ ಮರೆಮಾಡಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಪ್ರಯಾಣಿಕರಿಬ್ಬರ ಬಳಿ 24 ಕ್ಯಾರೆಟ್ ಪರಿಶುದ್ಧತೆಯ ಒಟ್ಟು 815 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ರೂ. 50,93,750 ಎಂದು ಅಂದಾಜಿಸಲಾಗಿದೆ. ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಟರ್ಫ್ ಕ್ಲಬ್ ಮೇಲೆ ಸಿಸಿಬಿ ದಾಳಿ: ₹3.47 ಕೋಟಿ ರೂ. ಜಪ್ತಿ