ಬೆಂಗಳೂರು: ಡಾ.ಬಿ.ಕೆ.ಎಸ್ ವರ್ಮಾ ನಾಡಿನ, ಹಾಗೇ ಅಂತಾರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕಲಾವಿದರು. ಕರ್ನಾಟಕ ರಾಜ್ಯೋತ್ಸವದಂದು ಎಲ್ಲೆಡೆ ಕನ್ನಡ ಧ್ವಜ ಹಾರಿಸಿ, ಕನ್ನಡ ಭುವನೇಶ್ವರಿ ದೇವಿಯ ಚಿತ್ರ ಪೂಜಿಸಲಾಗುತ್ತದೆ. ಆದ್ರೆ ಆ ಭುವನೇಶ್ವರಿ ಚಿತ್ರ ಬಿಡಿಸಿದ ಕಲಾವಿದರಾದ ವರ್ಮಾ ಅವರಿಗೆ ಇಂದಿಗೂ ಸಣ್ಣ ನೋವಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾ.ಶಿ. ಮರುಳಯ್ಯ ಅವರು ಭುವನೇಶ್ವರಿ ಚಿತ್ರ ಬೇಕು ಅಂತ ಕೇಳಿದರು. ವಿಶೇಷ ಕಲ್ಪನೆಗಳೊಂದಿಗೆ, ಸಸ್ಯಶಾಮಲೆ ಸಂಕೇತವಾಗಿ ಹಸಿರು ಸೀರೆ ಉಟ್ಟ, ಡಾಬಿನಲ್ಲಿ ಹೊಯ್ಸಳರನ್ನು ಬರೆದು, ರನ್ನ - ಪಂಪರನ್ನು ಕಿವಿಯೋಲೆಯಲ್ಲಿ ಚಿತ್ರಿಸಿ, ಚಿತ್ರ ಬರೆಯಲಾಯಿತು. ಆದ್ರೆ ಚಿತ್ರ ಸಂಪೂರ್ಣವಾಗುವ ಮೊದಲೇ ಉತ್ಸವಕ್ಕಾಗಿ ತೆಗೆದುಕೊಂಡು ಹೋಗಲಾಯಿತು. ಚಿತ್ರ ಸಂಪೂರ್ಣವಾಗದೇ ನನ್ನ ಸಹಿ ಹಾಕುವುದಿಲ್ಲ. ಆದರೆ, ನಂತರ ಚಿತ್ರಕ್ಕೆ ಸಹಿ ಹಾಕಲು ಅವಕಾಶವೇ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗಿನ ಅಧ್ಯಕ್ಷರು ಮನು ಬಳಿಗಾರ್ ಅವರನ್ನು ಈ ಬಗ್ಗೆ ಕೇಳಿದಾಗಲೂ, ಅದಕ್ಕೆ ದಾಖಲೆ ಏನಿದೆ ಎಂದು ಕೇಳಿದರು, ಇದು ಮನಸ್ಸಿಗೆ ನೋವಾಗಿದೆ. ಬೇಲೂರು ಶಿಲಾಬಾಲಿಕೆಯರ ಶಿಲ್ಪ ಕೆತ್ತಿದದವರ ಚಿತ್ರವೂ ಎಲ್ಲಿಯೂ ಇಲ್ಲ. ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟರು, ಹೊಯ್ಸಳರು ಕಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರ ಕುರಿತಾದ ಒಂದು ದೃಶ್ಯವನ್ನು ಚಿತ್ರಿಸಿ ಪ್ರದರ್ಶನ ಮಾಡಿದ್ರೆ ನಿಜವಾದ ಕಣ್ಣು ತುಂಬುವಂತಹ ಚಿತ್ರಗಳಾಗುತ್ತವೆ, ಕನ್ನಡ ರಾಜ್ಯೋತ್ಸವಕ್ಕೂ ಒಂದು ಕಳೆ ಬರುತ್ತದೆ ಎಂದರು.