ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ರಜೆ ಮೇಲೆ ತೆರಳಿರುವ ವಿಷಯ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿದ್ದು, ಕಾಂಗ್ರೆಸ್ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿರುಗೇಟು ನೀಡಿದ್ದಾರೆ.
ಡಾ. ಮಂಜುನಾಥ್ ಅವರನ್ನು ತಾತ್ಕಾಲಿಕವಾಗಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕರ ಹುದ್ದೆಗೆ ಪ್ರಭಾರದಲ್ಲಿರಿಸಲಾಗಿತ್ತು. ಪ್ರಸ್ತುತ ಅವರು ಸ್ವಂತ ಕೋರಿಕೆ ಮೇರೆಗೆ ರಜೆಗೆ ತೆರಳಿದ್ದಾರೆ. ಕೋವಿಡ್ ಪರಿಸ್ಥಿತಿಯಲ್ಲಿ ಸಮರ್ಥ ನಿರ್ವಹಣೆಗಾಗಿ ಪ್ರಾಧ್ಯಾಪಕರಿಗೆ ಪ್ರಭಾರ ವಹಿಸಲಾಗಿದೆ. ರಾಜ್ಯದ ವಿರೋಧ ಪಕ್ಷದ ಕಾರ್ಯಾಧ್ಯಕ್ಷರಾಗಿ ವಾಸ್ತವಾಂಶ ಅರಿಯದೆ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಕ್ಕೆ ಡಾ. ಸುಧಾಕರ್ ಸ್ಪಷ್ಟೀಕರಣ ನೀಡಿದ್ದಾರೆ.
ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಅಕ್ರಮ ಎಸಗಿದ ಬಿಜೆಪಿ ಸರ್ಕಾರ, ಈಗ ಆಸ್ಪತ್ರೆ ವೈದ್ಯರನ್ನು ರಜೆ ಮೇಲೆ ಕಳಿಸಿದೆ. ರಾಜ್ಯದ ಪ್ರಮುಖ ಆಸ್ಪತ್ರೆಯಾದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಅವರನ್ನು ಆರು ವಾರಗಳ ಕಾಲ ರಜೆ ಮೇಲೆ ಕಳುಹಿಸಲಾಗಿದೆ. ಕೋವಿಡ್ ಸಮಸ್ಯೆ ಇರುವಾಗಲೇ ನಿರ್ದೇಶಕರನ್ನು ರಜೆ ಮೇಲೆ ಕಳುಹಿಸಿದ್ದು ಯಾಕೆ?, ಏಕಾಏಕಿ ನಿರ್ದೇಶಕರನ್ನು ಬದಲಾಯಿಸುವುದು ಯಾಕೆ?, ಇದರ ಹಿಂದೆ ಯಾರ ಹಿತಾಸಕ್ತಿ ಇದೆ ಎಂದು ಈಶ್ವರ್ ಖಂಡ್ರೆ ಟ್ವೀಟ್ ಮಾಡಿದ್ದರು.