ಬೆಂಗಳೂರು : ಕೊರೊನಾ ಸೋಂಕು ಅದೆಷ್ಟೋ ಸಾವು-ನೋವಿಗೆ ಸಾಕ್ಷಿಯಾಗಿದ್ದು ಗೊತ್ತೆ ಇದೆ. ಹಾಗೇ ಪ್ರತಿಯೊಬ್ಬರಿಗೂ ಸ್ವಚ್ಛತೆ ಪಾಠ ಮಾಡಿದ್ದು ಸುಳ್ಳಲ್ಲ. ಸಾಂಕ್ರಾಮಿಕ ರೋಗಗಳು ಅಲೆಗಳಂತೆ ಅಪ್ಪಳಿಸುವ ಕಾರಣಕ್ಕೆ ಹೆಚ್ಚು ಮುಂಜಾಗ್ರತಾ ಕ್ರಮ ಅನಿರ್ವಾಯವಾಗಿತ್ತು. ರಾಜ್ಯದಲ್ಲಿ ಮೊದಲ ಅಲೆಯಲ್ಲಿ ಸೋಂಕು ಇಳಿಕೆಯಾದ ಸಮಯದಲ್ಲಿ 2ನೇ ಅಲೆ ಬಗ್ಗೆ ಎಚ್ಚರ ಕೊಟ್ಟಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿಬಿಡ್ತು.
ಇದರ ಪರಿಣಾಮದಿಂದಲೇ 2ನೇ ಅಲೆ ಹೊಡೆತವನ್ನ ಅನುಭವಿಸಬೇಕಾಯ್ತು. ಆಸ್ಪತ್ರೆ, ವೈದ್ಯರು, ಆಕ್ಸಿಜನ್ ವ್ಯವಸ್ಥೆ, ಬೆಡ್ ವ್ಯವಸ್ಥೆ, ಔಷಧಿ ಕೊರತೆ ಹೀಗೆ ನಾನಾ ವೈದ್ಯಕೀಯ ಸಮಸ್ಯೆ ಎದುರಿಸಲು ಸರ್ಕಾರ, ಆರೋಗ್ಯ ಇಲಾಖೆ ಪರದಾಟ ಅನುಭವಿಸಬೇಕಾಯ್ತು. ಇದರಿಂದ ಮೊದಲ ಅಲೆಯಲ್ಲಿ ಸಂಭವಿಸಿದ್ದ ಸಾವಿನ ಸಂಖ್ಯೆ 2ನೇ ಅಲೆಯಲ್ಲಿ ಕೇವಲ 1 ತಿಂಗಳಲ್ಲಿ ಸಂಭವಿಸಿತು.
ಇದೀಗ 3ನೇ ಅಲೆಯ ಎಚ್ಚರಿಕೆ ನೀಡಿರುವ ತಜ್ಞರು, ಸರ್ಕಾರಕ್ಕೆ ಮಧ್ಯಂತರ ವರದಿಯನ್ನ ಸಲ್ಲಿಸಿದ್ದಾರೆ. ಹಾಗಾದರೆ, 2ನೇ ಅಲೆಯ ಹೊಡೆತದಿಂದ ಸರ್ಕಾರ ಪಾಠ ಕಲಿಯಿತಾ? ಮೂರನೇ ಅಲೆ ಬರುವ ಮುನ್ನ ಸರ್ಕಾರ ಈಗಲೇ ಎಚ್ಚೆತ್ತುಕೊಂಡಿದೆಯೇ?. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಹೆಚ್ಚಳವಾಗ್ತಿದೆ. ಆಕ್ಸಿಜನ್ ಸಮಸ್ಯೆ ಆಗದಂತೆ ಸರ್ಕಾರ ಮಾಡ್ತಿರುವ ಪ್ಲಾನ್ ಏನು.? ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನ ಹೇಗೆ ಬಳಸಿಕೊಳ್ಳಲಾಗ್ತಿದೆ. ಈ ಕುರಿತು ಮಾಹಿತಿ ಇಲ್ಲಿದೆ.
ಹೇಗಿದೆ ತಯಾರಿ?
- ಜಿಲ್ಲೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಹೆಚ್ಚಳ ಮಾಡಲಾಗ್ತಿದೆ.
- ಜಿಲ್ಲಾ ಆಸ್ಪತ್ರೆಗಳಲ್ಲಿ ಸದ್ಯ ಕನಿಷ್ಠ 25 ಐಸಿಯು ಬೆಡ್‌ಗಳಿದ್ದು, ಅದನ್ನ 50 ಬೆಡ್‌ಗಳಿಗೆ ಏರಿಸಲಾಗ್ತಿದೆ.
- ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 20 ಮಕ್ಕಳ ಐಸಿಯು ಮಾಡಲಾಗ್ತಿದೆ.
- ನಿಯೋ ನೆಟಲ್ ವೆಂಟಿಲೇಟರ್ ಕೂಡ ಅಳವಡಿಕೆ ಮಾಡಲಾಗ್ತಿದೆ.
- ಜಿಲ್ಲಾ ಆಸ್ಪತ್ರೆಗಳಲ್ಲಿ ಸದ್ಯ 6 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕರ್ ಇದೆ. ಹೀಗಾಗಿ, 13 ಕೆಎಲ್ ಸಾಮರ್ಥ್ಯ ಹೊಂದುವಂತೆ ಟ್ಯಾಂಕರ್ ಅಳವಡಿಕೆ ಮಾಡಲಾಗ್ತಿದೆ.
- ಮೂರರಿಂದ ನಾಲ್ಕು ದಿನಗಳವರೆಗೆ ಆಗುವಷ್ಟು ಆಕ್ಸಿಜನ್ ಇರುವಂತೆ ವ್ಯವಸ್ಥೆ ಮಾಡಲಾಗ್ತಿದೆ.
- ಇದಲ್ಲದೇ 1000 ಎಲ್ಪಿಎಂ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಕೂಡ ನಿರ್ಮಾಣ ಮಾಡಲಾಗ್ತಿದೆ.
- ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್‌ಗಳನ್ನ 100ಕ್ಕೆ ಹೆಚ್ಚಿಸಲಾಗ್ತಿದೆ.
- ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಬಳಸಲು ತೀರ್ಮಾನ.
- ಇಂಡಿಯನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ಸ್‌ನಲ್ಲಿ ನೋಂದಣಿ ಮಾಡಿಕೊಂಡಿರುವವರು ಕರ್ನಾಟಕದಲ್ಲಿ 3000 ಮಕ್ಕಳ ವೈದ್ಯರಿದ್ದಾರೆ.
- ಪ್ರತಿ ಜಿಲ್ಲೆಯಲ್ಲಿ ಮಕ್ಕಳ ವೈದ್ಯರ ಮ್ಯಾಪಿಂಗ್ ಮಾಡಲಾಗ್ತಿದ್ದು, ಸರ್ಕಾರಿ, ಖಾಸಗಿ ವೈದ್ಯರನ್ನು ಬಳಕೆ ಮಾಡಲು ಕ್ರಮ.
- ಇತರ ವೈದ್ಯರಿಗೂ ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ತರಬೇತಿ ನೀಡಿ ತಯಾರಿ ಮಾಡಿಕೊಳ್ಳಲಾಗ್ತಿದೆ.
- ಶೇ. 10 ರಷ್ಟು ಐಸಿಯು ಬೆಡ್ ಹೆಚ್ಚಳ ಮಾಡಲಾಗ್ತಿದೆ.
- ಶೇ.20ರಷ್ಟು ಆಕ್ಸಿಜನ್ ಬೆಡ್‌ಗಳನ್ನ ಹೆಚ್ಚಳ ಮಾಡಲಾಗಿದೆ.
ಐಸಿಯು ಬೆಡ್ ನಿರ್ವಹಣೆಗೆ ಎಂಬಿಬಿಎಸ್ ವೈದ್ಯರ ನೇಮಕ
ಈಗಾಗಲೇ ಆರೋಗ್ಯ ಇಲಾಖೆಯಲ್ಲಿ 1740 ವೈದ್ಯರನ್ನ ನೇರ ನೇಮಕಾತಿ ಮಾಡಲಾಗಿದೆ. ಇದರ ಜೊತೆಗೆ ಯಾರು ಎಂಬಿಬಿಎಸ್ ಮುಗಿಸಿರ್ತಾರೋ ಅವರು ಕಡ್ಡಾಯವಾಗಿ ಒಂದು ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.
ಹಾಗೆಯೇ 1001 ವೈದ್ಯರನ್ನ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಲಾಗಿದೆ. ಅವರನ್ನ 18 ವೈದ್ಯಕೀಯ ಕಾಲೇಜುಗಳಲ್ಲಿ ನೇಮಿಸಲಾಗಿದೆ. 3ನೇ ಅಲೆಯ ಕಾರಣಕ್ಕೆ ಆರೋಗ್ಯ ಇಲಾಖೆಗಾಗಿ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಐಸಿಯುಗಳಲ್ಲಿ ಕೆಲಸ ಮಾಡಲು ತಜ್ಞರೊಂದಿಗೆ ಎಂಬಿಬಿಎಸ್ ವೈದ್ಯರ ಅವಶ್ಯಕತೆ ಇದೆ. ಐಸಿಯುನಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಕುರಿತು ತರಬೇತಿಯನ್ನೂ ಸಹ ನೀಡಲಾಗ್ತಿದೆ ಎಂದರು.
ಆನ್ಲೈನ್ ಕೌನ್ಸೆಲಿಂಗ್ ಮುಗಿದಿದೆ. ಜೂನ್ ತಿಂಗಳ 30ರಂದು ಸುಮಾರು 666 ವೈದ್ಯರು ನೇಮಕ ಆಗಲಿದ್ದಾರೆ. ಎನ್‌ಹೆಚ್ಎಂನಲ್ಲಿ 340 ವೈದ್ಯರ ಸ್ಥಾನ ಖಾಲಿ ಇತ್ತು. ಅದನ್ನ ಪೂರ್ಣ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 90 ಇದ್ದು, 90 ವೈದ್ಯರ ನೇಮಕಾತಿ ಆಗಿದೆ. ನೆಪ್ರೋಯುರಾಲಜಿ ಇನ್ಸ್ಟಿಟ್ಯೂಟ್ಗೆ 3 ವೈದ್ಯರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ 2108 ಖಾಲಿ ಹುದ್ದೆಯಲ್ಲಿ, 2053 ಅಭ್ಯರ್ಥಿಗಳು ಕೌನ್ಸಿಲಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ.
ಓದಿ: Supreme Court ನೇಮಿಸಿರುವ ಕಮಿಟಿ ಮಾಡಿರುವ ಆರೋಪ ಸುಳ್ಳು: ಕೋಡಿಹಳ್ಳಿ ಚಂದ್ರಶೇಖರ್