ಬೆಂಗಳೂರು: ಕರ್ನಾಟಕದ ಗಡಿ ಭಾಗದಲ್ಲಿ ಅನಗತ್ಯವಾಗಿ ಆಗಾಗ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟದ ಹಿರಿಯ ಸಚಿವರು ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದ ಬಗ್ಗೆ ಆಗಾಗ ಗೊಂದಲಮಯ ಹೇಳಿಕೆ ನೀಡುತ್ತಿರುವುದು ಖಂಡನೀಯ. ನಾಡಿನ ಗಡಿ ಮತ್ತು ಜಲ ವಿಷಯದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುವುದರ ಮೂಲಕ ಗಡಿ ಭಾಗದಲ್ಲಿನ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತಿರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ.
ಕನ್ನಡಿಗರು ವಿಶೇಷವಾಗಿ ವಾಸವಿರುವ ಕನ್ನಡ ಭಾಷಿಕರ ಪ್ರದೇಶಗಳಾದ ಸೊಲ್ಲಾಪುರ, ಜತ್, ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕೆಂಬುದು ಅಲ್ಲಿ ವಾಸವಿರುವ ಕನ್ನಡಿಗರ ಒಕ್ಕೋರಲಿನ ಬೇಡಿಕೆಯಾಗಿದೆ. ವಿಶೇಷವಾಗಿ ಕನ್ನಡ ಭಾಷಿಕರು ವಾಸಮಾಡುತ್ತಿರುವ ಈ ಭಾಗದಲ್ಲಿ ಕನ್ನಡ ಅಸ್ಮಿತೆಯ ವಾತಾವರಣವು ತುಂಬಾ ಜಾಗೃತವಾಗಿದೆ. ಅಲ್ಲಿನ ಕನ್ನಡಿಗರು, ಭೌಗೋಳಿಕವಾಗಿ ಮಹಾರಾಷ್ಟ್ರ ರಾಜ್ಯದಲ್ಲಿದ್ದರೂ ಕರ್ನಾಟಕದೊಂದಿಗೆ ಭಾವನಾತ್ಮಕವಾದ ಸಂಬಂಧಗಳನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ಪುಣೆಯಲ್ಲಿ ಕರ್ನಾಟಕ ಸಾರಿಗೆ ಬಸ್‌ಗೆ ಕಪ್ಪು ಮಸಿ: ಮರಾಠ ಮಹಾಸಂಘ ಉದ್ಧಟತನ
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಈ ಗಡಿ ಭಾಗಗಳಲ್ಲಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಗತ್ಯತೆಗಳನ್ನು ಪೂರೈಸುವ ದಿಸೆಯಲ್ಲಿ ಹೆಚ್ಚಿನ ಆಸಕ್ತಿ ಮತ್ತು ಕಾಳಜಿಯನ್ನು ತೋರಿಸುತ್ತ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಗಡಿ ವಿವಾದಗಳ ಬಗ್ಗೆ ಆಗಾಗ ತಗಾದೆ ತೆಗೆಯುವುದರ ಜತೆಗೆ ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡುವ ವಾತಾವರಣವು ನಿರ್ಮಾಣವಾಗುತ್ತಿರುವುದು ತುಂಬಾ ವಿಷಾದನೀಯ. ಕನ್ನಡ ಭಾಷಿಕರು ಹೆಚ್ಚು ಇರುವ ಜತ್ತ ಅಕ್ಕಲಕೋಟೆ ಮತ್ತು ಸೊಲ್ಲಾಪುರದಲ್ಲಿನ ಅನೇಕ ಶಿಕ್ಷಣ ಸಂಸ್ಥೆಗಳಿಗೆ ನಮ್ಮ ಪ್ರಾಧಿಕಾರವು ಅನುದಾನ ನೀಡುವುದರ ಜತೆಗೆ ಅಲ್ಲಿ ಕನ್ನಡ ಅಸ್ಮಿತೆಯ ಸಂರಕ್ಷಣೆಯ ದೃಷ್ಟಿಯಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎರಡೂ ರಾಜ್ಯಗಳ ನಡುವೆ ಭಾಷಾ ಸಾಮರಸ್ಯವನ್ನು ಕಾಪಾಡಲು ನಮ್ಮ ಪ್ರಾಧಿಕಾರ ವಿಶೇಷವಾಗಿ ಶ್ರಮಿಸುತ್ತಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಕನ್ನಡಿಗರು ವಿಶೇಷವಾಗಿ ವಾಸಮಾಡುತ್ತಿರುವ ಭೌಗೋಳಿಕ ಭಾಗಗಳ ಬಗ್ಗೆ ಅನಗತ್ಯವಾದ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಮರಾಠಿಗರ ಮತ್ತು ಕನ್ನಡಿಗರ ನಡುವಣ ಭಾಷಾ ಸಾಮರಸ್ಯವನ್ನು ಕದಡಬಾರದು ಎಂದು ಸೋಮಶೇಖರ್ ವಿನಂತಿಸಿದ್ದಾರೆ.
ಇದನ್ನೂ ಓದಿ: ಗಡಿ ಭಾಗದಲ್ಲಿನ ಕನ್ನಡಿಗರ ಅಭಿವೃದ್ಧಿಗೆ ಸಿಎಂ ಅನುದಾನ: ಮಹಾರಾಷ್ಟ್ರ ಕನ್ನಡಿಗರ ಹರ್ಷ