ಕೆಆರ್ಪುರ/ಬೆಂಗಳೂರು: ಡಾ. ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿ ಅಂಗವಾಗಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಬೆಂಗಳೂರು ಪೂರ್ವ ತಾಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ಜೀವನ, ಹೋರಾಟ ಎಲ್ಲರಿಗೂ ಸ್ಫೂರ್ತಿ ಎಂದರು. ಇನ್ನು ಈ ಬಾರಿ ಕೊರೊನಾ ಸೋಂಕು ಪ್ರಪಂಚದಾದ್ಯಂತ ಹರಡಿರುವ ಹಿನ್ನೆಲೆಯಲ್ಲಿ ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ. ಅಲ್ಲದೇ ಸೋಂಕು ಹರಡದಂತೆ ಸೂಕ್ತ ಕ್ರಮಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದ್ದು, ಬಡವರಿಗೆ ಹಾಗೂ ಕಾರ್ಮಿಕರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದರು.
ತಹಶೀಲ್ದಾರ್ ತೇಜಸ್ ಕುಮಾರ್ ಮಾತನಾಡಿ, ಮಹದೇವಪುರ ಕ್ಷೇತ್ರದ 11 ಪಂಚಾಯತಿಗಳ ವ್ಯಾಪ್ತಿಯಲ್ಲಿ ಬೇರೆ ರಾಜ್ಯ ಹಾಗೂ ಜಿಲ್ಲೆಗಳ 20 ಸಾವಿರ ಮಂದಿಗೆ ಕಿಟ್ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಹಾಗೂ ಸುರಕ್ಷತಾ ಸಲಕರಣೆಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿತರಿಸಲಾಗಿದ್ದು, ಕಣ್ಣೂರು, ಕಾಟ್ಮಂನಲ್ಲೂರು ಹಾಗೂ ಕೊಡತಿಯಲ್ಲಿ 4 ಸಾವಿರ ಆಹಾರಗಳ ಪ್ಯಾಕೇಟ್ಗಳನ್ನು ವಿತರಿಸಲಾಗುತ್ತಿದೆ. ವಿದೇಶದಿಂದ ಬಂದವರಿಗೆ 28 ದಿನಗಳ ಕಾಲ ಕ್ವಾರಂಟೈನ್ ಮಾಡಿದ್ದು, ಸೋಂಕು ಕಂಡು ಬಂದಿಲ್ಲ ಎಂದು ತಿಳಿಸಿದರು.