ಬೆಂಗಳೂರು: ನಗರದಲ್ಲಿ ವೃದ್ಧ ದಂಪತಿಯನ್ನು ಕೊಲೆಗೀಡಾಗಿದ್ದು, ಅವರ ಮಗನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್, ಎಫ್ಎಸ್ಎಲ್ ತಂಡ, ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನರಸಿಂಹ ರಾಜು, ಸರಸ್ವತಿ ಕೊಲೆಗೀಡಾಗಿರುವ ದಂಪತಿ. ಮೂಲತಃ ಮೈಸೂರಿನವರಾದ ಈ ವೃದ್ಧ ದಂಪತಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ರಂಗನಾಥಪುರದಲ್ಲಿ ಕಳೆದ ಕೆಲ ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಮಗ ಸಂತೋಷ್ ಜೊತೆ ವಾಸವಿದ್ರು.
ಮೃತ ನರಸಿಂಹರಾಜು ಅವರು ಮದುವೆ ಬ್ರೋಕರ್ ಆಗಿ ಕೆಲಸ ಮಾಡ್ತಿದ್ದು, ಕಳೆದ ಹತ್ತು ವರ್ಷಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಅವರ ಪತ್ನಿ ಸರಸ್ವತಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಐದು ವರ್ಷದ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಹಾಗೆ ಅವರ ಮಗ ಸಂತೋಷ್ ವೃತ್ತಿಯಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದು, ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ತನ್ನ ಸ್ವಂತ ಕಚೇರಿ ಹೊಂದಿದ್ದಾರೆ. ಪತ್ನಿ ಗರ್ಭಿಣಿ ಆಗಿರುವ ಹಿನ್ನೆಲೆ ಆಕೆಯನ್ನು ಊರಿಗೆ ಬಿಟ್ಟು ಬಂದು ತಾಯಿ-ತಂದೆ ಜೊತೆ ಕಾಮಾಕ್ಷಿಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಆದರೆ ಇಂದು ಬೆಳಗ್ಗೆ ಕೆಲಸದಾಕೆ ಕೆಲಸಕ್ಕೆಂದು ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಹೀಗಾಗಿ ಒಳಗೆ ಬಂದು ನೋಡಿದಾಗ ಹಾಲ್ನಲ್ಲಿ ನರಸಿಂಹ ರಾಜು ಮೃತದೇಹ ಬಿದ್ದಿತ್ತು. ಬಳಿಕ ರೂಂನಲ್ಲಿ ಸರಸ್ವತಿ ಅವರು ಬಾಯಿಗೆ ಬಟ್ಟೆ ತುರುಕಿರುವ ಸ್ಥಿತಿಯಲ್ಲಿ ಶವವಾಗಿ ಬಿದ್ದಿದ್ದರು. ಗಾಬರಿಗೊಂಡ ಕೆಲಸದಾಕೆ ಕೂಡಲೇ 100ಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ ನಿನ್ನೆ ರಾತ್ರಿಯಿಂದ ಪುತ್ರ ಸಂತೋಷ್ ನಾಪತ್ತೆಯಾಗಿದ್ದಾನೆ. ದಂಪತಿಯ ಹತ್ಯೆಯ ಹಿಂದೆ ಹಲವು ಅನುಮಾನಗಳು ಮೂಡಿದ್ದು ಮಗನ ಮೇಲೆ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ ಕಳೆದ ಎರಡು ತಿಂಗಳ ಹಿಂದೆ ಮನೆಯಲ್ಲಿ ಗಲಾಟೆ ನಡೆದಿತ್ತು. ಮಗ ತಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾನೆ ಎಂದು ಸರಸ್ವತಿ ಅವರು ಪಕ್ಕದ ಮನೆಯವರ ಬಳಿ ಹೇಳಿ ಪೊಲೀಸರಿಗೆ ದೂರು ನೀಡಬೇಕು, ನಮ್ಮ ಜೊತೆ ಬನ್ನಿ ಅಂದಿದ್ರಂತೆ. ಬಳಿಕ ನಾವು ಪಡೆದುಕೊಂಡು ಬಂದಿರೋದೇ ಇಷ್ಟು. ಏನು ಮಾಡೋಕೆ ಆಗಲ್ಲ ಎಂದಿದ್ದರಂತೆ. ಹೀಗಾಗಿ ಪಕ್ಕದ ಮನೆಯವರು ಸುಮ್ಮನಾಗಿದ್ದರಂತೆ. ಇದರಿಂದ ಏರಿಯಾದವರೆಲ್ಲ ಈ ದಂಪತಿಯ ಮಗನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.