ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರನ್ನು ಅವಮಾನಿಸುವ ಮೂಲಕ ಇಡೀ ಸ್ವಾತಂತ್ರ್ಯ ಸಂಗ್ರಾಮವನ್ನೇ ಅವಮಾನಿಸಲಾಗಿದ್ದು ಅಂತಹವರನ್ನು ಬೆಳೆಯಲು ಬಿಡಬೇಡಿ ಎಂದು ಬಿಜೆಪಿ ಸದಸ್ಯರಿಗೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮನವಿ ಮಾಡಿದರು.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 342 ರ ಅಡಿ ಪ್ರಸ್ತಾಪದ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಅತ್ಯಂತ ಉಗ್ರವಾಗಿ, ಕಟುವಾಗಿ ಖಂಡಿಸುತ್ತೇವೆ, ಅವರನ್ನು ಅವಮಾನಿಸುವ ಮೂಲಕ ಇಡೀ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಕೋಟ್ಯಂತರ ಜನರಿಗೆ, ಸಂವಿಧಾನಕ್ಕೆ, ದೇಶಕ್ಕೆ ಅಪಮಾನ ಮಾಡಿದ್ದಾರೆ, ಜಗತ್ತಿನ ಅತಿದೊಡ್ಡ ಪ್ರಜಾಸತಾತ್ಮಕ ರಾಷ್ಟ್ರವಾದ ಭಾರತದ ಪ್ರಭುತ್ವ ವ್ಯವಸ್ಥೆಗೆ ಮಾರಕವಾಗುವಂತಹ ಹೇಳಿಕೆ ನೀಡಿದ್ದಾರೆ. ಆ ಕಡೆ ಕುಳಿತವರು ಇನ್ನು ಮುಂದೆ ದೊರೆಸ್ವಾಮಿ ಅವರ ವಿರುದ್ಧ ಹೇಳಿಕೆ ನೀಡಿದವರನ್ನು ಮುಂದೆ ಬರಲು ಬಿಡಬೇಡಿ ಎಂದು ಮನವಿ ಮಾಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಸಿ.ಟಿ ರವಿ, ಜಯಪ್ರಕಾಶ್ ನಾರಾಯಣ್ ಕೂಡ ಸ್ವಾತಂತ್ರ್ಯ ಹೋರಾಟಗಾರ, ತುರ್ತುಪರಿಸ್ಥಿತಿ ವೇಳೆ ಅವರನ್ನು ಜೈಲಿಗೆ ಹಾಕಿದ್ದು ತಪ್ಪು ಎಂದು ಕ್ಷಮೆ ಕೇಳಿ, ಸಂವಿಧಾನ, ಮೂಲಭೂತ ಹಕ್ಕು ಉಲ್ಲಂಘಿಸಿದ್ದಕ್ಕೆ ಕ್ಷಮೆ ಕೇಳಿ ಎಂದು ಪ್ರತಿಪಕ್ಷ ನಾಯಕರಿಗೆ ಟಾಂಗ್ ನೀಡಿದರು.
ಸಾವರ್ಕರ್ ಅವರನ್ನು ಹೇಡಿ ಎನ್ನುತ್ತಾರೆ, ಯಾರು ಹೇಡಿ? ದೊರೆಸ್ವಾಮಿ ಅವರ ಬಗ್ಗೆ ಮಾತನಾಡಿದರೆ ತಪ್ಪು, ಸಾವರ್ಕರ್ ಬಗ್ಗೆ ಮಾತನಾಡಿದರೆ ಸರಿನಾ? ತುರ್ತುಸ್ಥಿತಿ ತಂದವರಿಂದ ಭೂತದ ಬಾಯಲ್ಲಿ ಭಗವದ್ಗೀತೆ ಬಂತಂತಾಗುತ್ತಿದೆ ಎಂದು ಸಿ.ಟಿ.ರವಿ ಕಾಲೆಳೆದರು.
ಮುತ್ಸದ್ದಿತನ ತೋರಿದ ಹೊರಟ್ಟಿ:
ಚರ್ಚೆಯ ನಂತರ ಮಾತು ಆರಂಭಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ವೀರ ಸಾವರ್ಕರ್ ಅಂತ ಹೆಸರು ಪಡೆದವರ ಬಗ್ಗೆ ಯಾರೂ ಮಾತನಾಡಬಾರದು, ಅದು ತಪ್ಪು ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯರು ಮೇಜು ಕುಟ್ಟಿ ಹೊರಟ್ಟಿ ಹೇಳಿಕೆಗೆ ಸಂತಸ ವ್ಯಕ್ತಪಡಿಸಿದರು.
ಸಾವರ್ಕರ್ ಬಗ್ಗೆಯಾಗಲೀ ಅದೇ ರೀತಿ ದೊರೆಸ್ವಾಮಿ ಅವರ ಬಗ್ಗೆಯಾಗಲಿ ಹಗುರವಾಗಿ ಮಾತನಾಡುವುದು ಸರಿಯಲ್ಲ, ಯಾವುದೋ ಕಾರಣಕ್ಕೆ ಮಾತನಾಡಿರಬಹುದು. ಆಳುವ ಪಕ್ಷ ಸಮರ್ಥನೆ ಮಾಡಿಕೊಳ್ಳಲು, ವಿರೋಧ ಪಕ್ಷ ವಿರೋಧ ಮಾಡಲು ಎನ್ನುವಂತಾಗಿದೆ. ಇದು ಬದಲಾಗಬೇಕು, ಪಕ್ಷಾತೀತವಾಗಿ ಚರ್ಚೆಗಳು ನಡೆಯಬೇಕು, ದೊರೆಸ್ವಾಮಿ ಅವರನ್ನು ನೋಡುವ ಅದೃಷ್ಟ ಸಿಕ್ಕಿರುವುದೇ ನಮ್ಮ ಪುಣ್ಯ. ಯಾರೋ ಬಂದು ನಮ್ಮ ಜೊತೆ ಸೆಲ್ಫಿ ತೆಗೆದುಕೊಂಡರೆ ನಾವು ಬೇಡ ಎಂದು ಹೇಳಲು ಸಾಧ್ಯವಿಲ್ಲ, ಅದರಲ್ಲಿ ಯಾರೋ ಕ್ರಿಮಿನಲ್ ಇದ್ದರೆ ಏನು ಮಾಡಬೇಕು. ದೊರೆಸ್ವಾಮಿ ಬಗ್ಗೆ ಸದನದ ಹೊರಗೆ ಮಾತನಾಡಿರುವುದಕ್ಕೆ ಕಾನೂನು ಪ್ರಕಾರ ಮಾನನಷ್ಟ ಮೊಕದ್ದಮೆಯನ್ನು ಅವರು ದಾಖಲಿಸಬಹುದು. ಕಾನೂನು ಪ್ರಕಾರ ಇಲ್ಲಿ ಯಾವ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ನಾವು ಇಲ್ಲಿ ಬಂದಿದ್ದೇವೆ ಹಾಗಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಯಾರೂ ಸಹ ಹಗುರವಾಗಿ ಮಾತನಾಡಬಾರದು ಎನ್ನುವ ನಿರ್ದೇಶನವನ್ನು ನೀಡಿ ಎಂದು ಮನವಿ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ, ಸರ್ಕಾರ ಸೂಕ್ತ ಉತ್ತರ ನೀಡಿ ಇದನ್ನು ಇಲ್ಲಿಗೆ ಮುಗಿಸಬೇಕು ಎಂದು ಹೊರಟ್ಟಿ ಸಲಹೆ ನೀಡಿದರು.