ಬೆಂಗಳೂರು : ವಯಸ್ಸಾದ ನಂತರ ಅಥವಾ ಸಾವಿನ ಬಳಿಕ ಆಸ್ತಿಯನ್ನು ಮಕ್ಕಳಿಗೆ ವರ್ಗಾವಣೆ ಮಾಡುವುದು ಸಾಮಾನ್ಯ. ಜಮೀನು ಖರೀದಿಸಿದ ನಂತರ ಯಾರಿಗೆ ಕೊಡ ಬಯಸುತ್ತೇವೆಯೋ ಅವರಿಗೆ ಆಸ್ತಿಯನ್ನು ವರ್ಗಾವಣೆ ಮಾಡಲಾಗುತ್ತದೆ. ಆದರೆ, ಕೆಲವೊಮ್ಮೆ ಮೋಸ ಹೋಗುವ ಸಂದರ್ಭಗಳೂ ಇರುತ್ತವೆ.
ಹಾಗಾಗಿ, ನಮ್ಮ ಜೀವಿತಾವಧಿಯಲ್ಲಿ ಅಥವಾ ಸಾವಿನ ನಂತರ ಮಕ್ಕಳಿಗೆ ಆಸ್ತಿ ವರ್ಗಾವಣೆಯಾಗುವುದನ್ನು ಖಾತರಿ ಪಡಿಸಿಕೊಳ್ಳುವುದು ಒಳ್ಳೆಯದು. ಕೆಲವು ಸಲ ಸೂಕ್ತ ತಿಳುವಳಿಕೆ ಮತ್ತು ಕಾನೂನು ತಜ್ಞರ ಸಲಹೆ, ಮಾರ್ಗದರ್ಶನ ಇಲ್ಲದೆ ಗೊಂದಲಕ್ಕೀಡಾಗುವುದು ಉಂಟು. ತಮ್ಮ ಆಸ್ತಿಯನ್ನು ಸುರಕ್ಷಿತವಾಗಿ ವರ್ಗಾವಣೆ ಮಾಡುವುದು ಹೇಗೆಂಬುದರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.
ಆಸ್ತಿ ವರ್ಗಾವಣೆ ಪ್ರಕ್ರಿಯೆ ಹೇಗಿರುತ್ತದೆ?: ಆಸ್ತಿ ವರ್ಗಾವಣೆ ಕಾಯಿದೆ 122ನೇ ವಿಧಿ ಅನ್ವಯ ವ್ಯಕ್ತಿಯೊಬ್ಬ ಆಸ್ತಿಯನ್ನು ‘ಗಿಫ್ಟ್ ಡೀಡ್’ ಮೂಲಕ ವರ್ಗಾವಣೆ ಮಾಡಬಹುದು. ಈ ಒಪ್ಪಂದವು ಆಸ್ತಿ ವರ್ಗಾವಣೆಯಾಗುವ ವ್ಯಕ್ತಿಯ ಪ್ರತಿ ವಿವರವನ್ನು ಒಳಗೊಂಡಿರಬೇಕು. ಆಸ್ತಿ ವರ್ಗಾವಣೆಯ ಉಲ್ಲೇಖವಿರಬೇಕು. ಆಸ್ತಿ ಉಡುಗೊರೆಯನ್ನು ಪಡೆದಾತ ಸ್ವೀಕರಿಸಿದ ಅಂಶ ಒಪ್ಪಂದದಲ್ಲಿ ಇರಲೇಬೇಕು.
ಇಲ್ಲವಾದರೆ ಅದು ‘ಗಿಫ್ಟ್ ಡೀಡ್’ ಆಗುವುದಿಲ್ಲ. ಒಂದು ಉಡುಗೊರೆಯನ್ನು ಕಾನೂನು ಬದ್ಧವಾಗಿ ಮಾಡಬೇಕಾದರೆ ಉಡುಗೊರೆ ಸ್ವೀಕಾರವಾಗಿರಬೇಕು. ಆದರೆ, ಸ್ವೀಕಾರದ ಕುರಿತು ಯಾವುದೇ ನಿರ್ದಿಷ್ಟ ರೀತಿ-ನೀತಿಗಳನ್ನು ಹೇಳಲಾಗಿಲ್ಲ. ಗಿಫ್ಟ್ ಡೀಡ್ ಪಡೆದುಕೊಳ್ಳುವ ಮೂಲಕ ಅಥವಾ ಗಿಫ್ಟ್ ಆದ ನಂತರ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಉಡುಗೊರೆ ಸ್ವೀಕರಿಸಿರುವುದನ್ನು ಖಾತರಿಪಡಿಸಬಹುದು.
‘ಗಿಫ್ಟ್ಡೀಡ್’ ಪಡೆದರೂ ನೋಂದಣಿ ಕಡ್ಡಾಯ : ದಾನ ಪಡೆದುಕೊಂಡವರ ಹೆಸರಿನಲ್ಲಿ ನೋಂದಾವಣೆ ಮಾಡಿದ ಬಳಿಕ ಆಸ್ತಿಯ ದಾಖಲೆಗಳನ್ನು ನೀಡಿದರೆ ಅದು ಕೂಡ ಉಡುಗೊರೆಯನ್ನು ಸ್ವೀಕರಿಸಿದ ಕಾನೂನು ಬದ್ಧ ದಾಖಲೆಯಾಗಿರುತ್ತದೆ.
ಆದರೆ, ಆಸ್ತಿ ವರ್ಗಾವಣೆ ಕಾಯಿದೆ 123ನೇ ವಿಧಿಯನ್ವಯ ಆಸ್ತಿಯ ಹಕ್ಕುಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿ ಮೂಲಕ ದಾನ ಪಡೆದುಕೊಳ್ಳುವವರ ಹೆಸರಿಗೆ ನೀಡಿದರೆ ಮಾತ್ರ ಗಿಫ್ಟ್ ಡೀಡ್ ಸಿಂಧುವಾಗುತ್ತದೆ.
ಇದಕ್ಕೆ ಇಬ್ಬರು ಸಾಕ್ಷಿಗಳ ಅವಶ್ಯಕತೆ ಇರುತ್ತದೆ. ಗಿಫ್ಟ್ ಡೀಡ್ ಮಾಡುವ ಸಂದರ್ಭದಲ್ಲಿ ಸ್ಟ್ಯಾಂಪ್ ಶುಲ್ಕ ಪಾವತಿಸಬೇಕಾಗುತ್ತದೆ. ರಕ್ತ ಸಂಬಂಧಿಗಳಿಗೆ ಆಸ್ತಿಯನ್ನು ಗಿಫ್ಟ್ ಡೀಡ್ ಮೂಲಕ ವರ್ಗಾವಣೆ ಮಾಡಿದರೆ ಸರ್ಕಾರದ ಸ್ಟ್ಯಾಂಪ್ ಶುಲ್ಕದಲ್ಲಿ ತುಸು ವಿನಾಯಿತಿ ಇದೆ.
ಒಂದು ವೇಳೆ ಆಸ್ತಿಯನ್ನು ರಕ್ತ ಸಂಬಂಧಿಗಳಲ್ಲದ ಕುಟುಂಬದಿಂದ ಹೊರತಾದ ಸದಸ್ಯರಿಗೆ ನೀಡಿದರೆ ಆಗ ಹೆಚ್ಚಿನ ಸ್ಟ್ಯಾಂಪ್ ಶುಲ್ಕ ಕಟ್ಟಬೇಕಾಗುತ್ತದೆ. ಗಿಫ್ಟ್ ಡೀಡ್‌ನ ನೋಂದಾವಣೆ ಮಾಡದಿದ್ದರೆ ಅದು ಅಸಿಂಧುವಾಗುತ್ತದೆ.
ಇದೇ ರೀತಿ ಆಸ್ತಿಯ ಕುರಿತು ವಿವಾದಗಳಿದ್ದರೆ ಆಗ ಆಸ್ತಿಯನ್ನು ಉಡುಗೊರೆಯಾಗಿ ಪಡೆದುಕೊಂಡ ವ್ಯಕ್ತಿ ಅದರ ಮಾಲೀಕತ್ವವನ್ನು ಸಾಧಿಸಲು ಬರುವುದಿಲ್ಲ. ಒಂದು ವೇಳೆ ಅಂತಹ ಆಸ್ತಿ ಕನಿಷ್ಠ 12 ವರ್ಷಗಳ ಕಾಲ ಆತನ ಸ್ವಾಧೀನದಲ್ಲಿದ್ದರೆ ಆಗ ಸಹಜವಾಗಿ ಆತನಿಗೆ ಮಾಲೀಕತ್ವದ ಹಕ್ಕು ಬರುತ್ತದೆ. ಅಪ್ರಾಪ್ತ ವಯಸ್ಕರರ ಹೆಸರಿನಲ್ಲಿ ಗಿಫ್ಟ್ ಡೀಡ್ ಮಾಡಿದರೆ ಆಗ ಅವನ ಅಥವಾ ಅವಳ ಪಾಲಕರನ್ನು ಡೀಡ್ನಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ.
ಉಯಿಲು ಪತ್ರಕ್ಕೂ ಇದೆ ಮಾನ್ಯತೆ : ವ್ಯಕ್ತಿಯೊಬ್ಬ ಆಸ್ತಿಯ ಉತ್ತರಾಧಿಕಾರದ ಬಗ್ಗೆ ಉಯಿಲು ಪತ್ರ ಬರೆಯದೆ ಮೃತಪಟ್ಟರೆ ಆಗ ಉತ್ತರಾಧಿಕಾರವು ಆ ವ್ಯಕ್ತಿಯ ಧರ್ಮವನ್ನು ಅನುಸರಿಸಿ ವರ್ಗಾವಣೆಯಾಗುತ್ತದೆ. ಅಲ್ಲದೇ, ಉಯಿಲು ಪತ್ರವಿಲ್ಲದಿದ್ದರೆ ಆನುವಂಶಿಕ ಕಾನೂನು ಹಕ್ಕಿನ ಅಡಿಯಲ್ಲಿ ಆಸ್ತಿಯ ವರ್ಗಾವಣೆ ಅಥವಾ ಪಾಲು ಆಗುತ್ತದೆ.
ಆಸ್ತಿ ವರ್ಗಾವಣೆ ಕುರಿತ ಉಯಿಲು ಪತ್ರಕ್ಕೆ ಯಾವುದೇ ನಿರ್ದಿಷ್ಟವಾದ ಮಾದರಿಯಿಲ್ಲ. ಅದಕ್ಕೆ ಒಬ್ಬ ವಕೀಲನ ಮಾರ್ಗದರ್ಶನವೂ ಅಗತ್ಯವಿಲ್ಲ. ಖಾಲಿ ಹಾಳೆಯಲ್ಲಿ ತನಗೆ ಇಷ್ಟ ಬಂದಂತೆ ಉಯಿಲು ಪತ್ರ ಬರೆಯಬಹುದು. ಯಾವುದೇ ಒತ್ತಡ ಇಲ್ಲದಂತಹ ಸ್ಥಿತಿಯಲ್ಲಿ ಉಯಿಲು ಬರೆಯುವುದು ಉತ್ತಮ.
ಆದರೆ, ಉಯಿಲು ಇಷ್ಟಕ್ಕೇ ಕಾನೂನು ಬದ್ಧ ಮನ್ನಣೆ ಪಡೆಯುವುದಿಲ್ಲ. ಪತ್ರದಲ್ಲಿ ಉಯಿಲು ಬರೆದಾತನ ಸಹಿ ಅಥವಾ ಹೆಬ್ಬೆಟ್ಟು ಗುರುತು ಹಾಗೂ ಇದಕ್ಕೆ ಇಬ್ಬರು ಸಾಕ್ಷಿಗಳ ಸಹಿ ಅಗತ್ಯವಾಗಿ ಬೇಕು ಅಂತಾರೆ ಕಂದಾಯ ಇಲಾಖೆ ಅಧಿಕಾರಿಗಳು.