ಬೆಂಗಳೂರು: ದಿನಕ್ಕೊಂದು ತಿರುವು ಪಡೆಯುತ್ತಿರುವ ಸಿಡಿ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಯುವತಿ ಹಾಜರಾಗುವ ಸಾಧ್ಯತೆಯಿದೆ. ಯುವತಿ ಸ್ವಇಚ್ಛಾ ಹೇಳಿಕೆ ನೀಡಲು ಕೋರ್ಟ್ ಅನುಮತಿ ನೀಡಿದ್ದು, ಇಂದು ಮಧ್ಯಾಹ್ನದೊಳಗೆ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಿಡಿ ಲೇಡಿಯ ಹೇಳಿಕೆ ದಾಖಲು ಮಾಡುವ ವೇಳೆಯಲ್ಲಿ ಕೇವಲ ಮೂರು ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೇಳಿಕೆ ದಾಖಲಿಸುವ ನ್ಯಾಯಾಧೀಶರು, ಹೇಳಿಕೆ ನೀಡುವ ಯುವತಿ ಹಾಗೂ ವಿಡಿಯೋ ರೆಕಾರ್ಡಿಂಗ್ ಮಾಡುವ ವ್ಯಕ್ತಿ ಮಾತ್ರ ಇರುತ್ತಾರೆ.
ಇದನ್ನೂ ಓದಿ: ಯುವತಿ ಪೋಷಕರಿಂದ ನನ್ನ ವಿರುದ್ಧ ಆರೋಪ ಮಾಡಿಸಲಾಗುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಯುವತಿಯ ಪರ ವಕೀಲರು 164 ರ ಅಡಿ ಹೇಳಿಕೆ ನೀಡಲು ನ್ಯಾಯಾಲಯದಲ್ಲಿ ಅವಕಾಶ ಕೇಳುತ್ತಾರೆ. ಯಾವ ಕೋರ್ಟ್ ಹಾಲ್ನಲ್ಲಿ 164 ರ ಅಡಿ ಸ್ಟೇಟ್ಮೆಂಟ್ ಕೊಡಬೇಕು ಎಂದು ಕೋರ್ಟ್ ನಿರ್ಧರಿಸುತ್ತೆ. ಪ್ರಕರಣವನ್ನು ನಡೆಸುತ್ತಿರುವ (ಟ್ರೈಯಲ್) ನ್ಯಾಯಾಧೀಶರು ಯುವತಿ ಹೇಳಿಕೆ ದಾಖಲಿಸುವುದಿಲ್ಲ. ಬೇರೆ ಕೋರ್ಟ್ ಹಾಲ್ನ ನ್ಯಾಯಾಧೀಶರು ಹೇಳಿಕೆ ದಾಖಲಿಸಿಕೊಳ್ಳುತ್ತಾರೆ.
ಸ್ವಇಚ್ಚಾ ಹೇಳಿಕೆಯ ನಂತರ ಮೂರು ಪ್ರತಿಯನ್ನಾಗಿ ಮಾಡಲಾಗುತ್ತದೆ. ಒಂದು ಪ್ರತಿ ಹೇಳಿಕೆ ಪಡೆದ ನ್ಯಾಯಾಧೀಶರಿಗೆ, ಇನ್ನೊಂದು ಪ್ರತಿ ಪ್ರಕರಣದ ತನಿಖಾಧಿಕಾರಿ ಆಗಿರುವ ಪೊಲೀಸ್ ಅಧಿಕಾರಿಗೆ ಮೂರನೇ ಪ್ರತಿ ಕೇಸ್ ಟ್ರೈಯಲ್ ಇರುವ ಕೋರ್ಟ್ ಹಾಲ್ ನ ನ್ಯಾಯಾಧೀಶರಿಗೆ ನೀಡಲಾಗುತ್ತದೆ. ಹೇಳಿಕೆ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಳುಹಿಸಿಕೊಡಲಾಗುತ್ತದೆ.