ದೊಡ್ಡಬಳ್ಳಾಪುರ: ನಗರಸಭೆಯಿಂದ ಹಂಚಿಕೆಯಾದ ನಿವೇಶನದಲ್ಲಿ ವಯಸ್ಸಾದ ಅಂಧ ದಂಪತಿ ವಾಸವಾಗಿದ್ದಾರೆ, ಆದರೀಗ ಮನೆ ಖಾಲಿ ಮಾಡುವಂತೆ ವೃದ್ಧರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ, ಮನೆ ಉಳಿಸಿಕೊಡುವಂತೆ ವಯಸ್ಸಾದ ದಂಪತಿ ಕಣ್ಣೀರು ಹಾಕುತ್ತಿದ್ದಾರೆ.
ಮುನಿನರಸಮ್ಮ(60)ಮತ್ತು ಬಾಲಯ್ಯ(65) ಅಂಧ ದಂಪತಿಗೆ ಶಿವಕುಮಾರ್ ಎಂಬುವವರು ಮನೆ ಖಾಲಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾನೆ. ಗಂಡ ಬಾಲಯ್ಯನಿಗೆ ಶೇಕಡಾ 40 ಮಾತ್ರ ದೃಷ್ಟಿ ಇದೆ. ಆದರೆ, ಹೆಂಡತಿ ಮುನಿನರಸಮ್ಮರಿಗೆ ಶೇಕಡಾ 20 ರಷ್ಟು ಮಾತ್ರ ದೃಷ್ಟಿ ಇದೆ, ಬಾಲಯ್ಯನಿಗೆ ಬರುವ ವಿಕಲಚೇತನರ ಪಿಂಚಣಿ ಹಣದಲ್ಲಿ ಇಬ್ಬರ ಜೀವನ ನಡೆಯುತ್ತಿದೆ, ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ.
ಮಗ ಹೆಂಡತಿ ಮಕ್ಕಳ ಜೊತೆ ಬೇರೆ ವಾಸವಾಗಿದ್ದಾರೆ, ನಗರಸಭೆಯ ಅಶ್ರಯ ಮನೆಯೇ ಈ ದಂಪತಿಗೆ ಅಶ್ರಯವಾಗಿತ್ತು ಆದರೆ ಈಗ ಶಿವಕುಮಾರ್ ಎನ್ನುವ ವ್ಯಕ್ತಿ ಕಿರುಕುಳ ಕೊಡುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರದ ಮಾದಗೊಂಡನಹಳ್ಳಿ ರಸ್ತೆಯ ರಾಜೀವ್ ಗಾಂಧಿ ಬಡಾವಣೆಯ 2 ನೇ ಹಂತದ ಮನೆ ನಂಬರ್ 137 ಅಂಧ ದಂಪತಿ ವಾಸವಾಗಿರುವ ಮನೆ, ನಗರಸಭೆಯಿಂದ ಹಂಚಿಕೆಯಾದ ಮನೆಗಳಿಗೆ ಕೆಲವರು ವಾಸ ಮಾಡಲಿಕ್ಕೆ ಬರದೇ ಖಾಲಿ ಇತ್ತು.
ಹೀಗಾಗಿ ಈ ದಂಪತಿ 137 ನಂಬರ್ ಮನೆಯಲ್ಲಿ ವಾಸವಾಗಿದ್ದಾರೆ, ತಮ್ಮ ಹೆಸರಿಗೆ ಮನೆ ಮಂಜೂರು ಮಾಡುವಂತೆ ನಗರಸಭೆಗೆ 5 ಸಾವಿರ ರೂ ಸಹ ಕಟ್ಟಿದ್ದಾರೆ, ಶಾಸಕರಾದ ಟಿ. ವೆಂಕಟರಮಣಯ್ಯ ದಂಪತಿಗಳ ಸ್ಥಿತಿ ನೋಡಿ ಈ ಮನೆಯನ್ನ ಮಂಜೂರು ಮಾಡುವಂತೆ ನಗರಸಭೆಗೆ ಸೂಚನೆ ನೀಡಿದ್ದಾರೆ.
ಆದರೀಗ ಕೆಲವು ದಿನಗಳಿಂದ ವೃದ್ಧ ದಂಪತಿಗಳ ಮನೆ ಬಳಿಗೆ ಬರುತ್ತಿರುವ ಶಿವಕುಮಾರ್ ನಮ್ಮ ಹೆಸರಿಗೆ ಈ ಮನೆ ಮಂಜೂರು ಆಗಿದೆ ಮನೆ ಖಾಲಿ ಮಾಡುವಂತೆ ಕಿರುಕುಳ ಕೊಡುತ್ತಿದ್ದಾರೆ. ಈ ಮನೆ ಖಾಲಿ ಮಾಡಿದರೆ ಬೀದಿಯಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ದಂಪತಿಯದ್ದು. ಆಶ್ರಯ ಮನೆಗಳ ನಿಯಮದ ಪ್ರಕಾರ ಸರ್ಕಾರ ಮಂಜೂರಾದ ಮನೆಗಳಲ್ಲಿ ಖಾತೆದಾರರು ವಾಸ ಮಾಡಬೇಕು. ಒಂದು ವೇಳೆ ಯಾರು ವಾಸವಾಗದಿದ್ದರೆ ಅಲ್ಲಿ ಯಾರು ವಾಸವಾಗಿರುತ್ತಾರೋ ಅವರಿಗೆ ಕೊಡಬೇಕು. ಇದೇ ನಂಬಿಕೆಯಲ್ಲಿ ಅಂಧ ದಂಪತಿ ಇದ್ದಾರೆ.
ಓದಿ: ಟಾಟಾ ಸನ್ಸ್ನ ಕಾರ್ಯಕಾರಿ ಅಧ್ಯಕ್ಷರಾಗಿ ಎನ್.ಚಂದ್ರಶೇಖರ್ ಮರುನೇಮಕ