ಬೆಂಗಳೂರು (ಆನೇಕಲ್): ಕರ್ನಾಟಕ ಮೃಗಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ 'ಸನಿ' ಎಂಬ ನೀರುಕುದುರೆ ಮರಿಯನ್ನು ಲದ್ದಿ ವಿಸರ್ಜನೆ ತೊಂದರೆಯಿಂದ ಪಾರು ಮಾಡಿದ ಖ್ಯಾತಿಗೆ ಪಶು ವೈದ್ಯರ ತಂಡ ಪಾತ್ರವಾಗಿದೆ. ಎರಡು ವರ್ಷದ ಹಿಂದೆ ತಾಯಿ ದೃಶ್ಯಳಿಗೆ ಜನಿಸಿದ ಸನಿ ಎಂಬ ನೀರಾನೆ ಲದ್ದಿ ವಿಸರ್ಜನೆ ಮಾಡದೆ ನೋವಿನಿಂದ ಆಹಾರ-ನೀರು ಸೇವಿಸುತ್ತಿರಲಿಲ್ಲ. ಇದರಿಂದ ತಾಯಿಯ ಹಾಲನ್ನು ಕುಡಿಯದೆ ನಿತ್ರಾಣವಾಗಿತ್ತು.
ಉದ್ಯಾನದ ವೈದ್ಯರು ಬಾಳೆಹಣ್ಣಿನಲ್ಲಿ ಭೇದಿ ಮಾತ್ರೆ ಹಾಕಿ ಮಲ ವಿಸರ್ಜನೆ ಮಾಡಿಸುವ ಪ್ರಯತ್ನ ಮಾಡಿದರೂ ಯಶಸ್ವಿಯಾಗಿರಲಿಲ್ಲ. ಹೀಗಾಗಿ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಪನ್ವಾರ್ (ಪಶು ವೈದ್ಯ ತಜ್ಞ) ಮಾರ್ಗದರ್ಶನದಂತೆ ಡಾ.ಉಮಾಶಂಕರ್ ನೇತೃತ್ವದಲ್ಲಿ ಆಫ್ರಿಕಾ ಮತ್ತಿತರ ವಿದೇಶಿ ಮೃಗಾಲಯ ವೈದ್ಯರ ಸಲಹೆ ಪಡೆದು ಕ್ಲಿಷ್ಟಕರವಾದ ಅರವಳಿಕೆ ಮೂಲಕ ಔಷಧಿ ತಂತ್ರವನ್ನು ಬಳಸಿದ್ದರು.
ಹಿಪ್ಪೊಪೊಟಮಸ್ ಎರಡು ಇಂಚಿಗೂ ಮಿಗಿಲಾದ ದಪ್ಪ ಚರ್ಮ ಹೊಂದಿರುವುದರಿಂದ ಅರವಳಿಕೆ ಲಸಿಕೆ ಕಷ್ಟಸಾಧ್ಯ ಎಂದು ಗೊತ್ತಿದ್ದರೂ ಕಿವಿಯ ಹಿಂಬದಿ ಅರವಳಿಕೆ ನೀಡಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸನಿಯ ಹೊಟ್ಟೆಯಲ್ಲಿನ ಕಸ ಕಡ್ಡಿ ತೆಗೆದು ಅನಂತರ ರೋಗನಿರೋಧಕ ಲಸಿಕೆ ನೀಡಿ ಸನಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಸಿಂಗಾಪುರ್ನಿಂದ ಮೈಸೂರಿಗೆ ಆಗಮಿಸಿದ ಬಿಳಿ ಘೇಂಡಾಮೃಗಗಳು!
ನಂತರ ಅರವಳಿಕೆಯ ಪ್ರಭಾವವನ್ನು ವಾಪಸ್ ಪಡೆಯುವ ಔಷಧ ನೀಡಿ, ಮರು ಪ್ರಜ್ಞಾವಸ್ಥೆಗೆ ಬರುವಂತೆ ಮಾಡಿದ್ದಾರೆ. ಸನಿ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೆಲ ಹೊತ್ತಿನಲ್ಲೇ ಬೂಸಾ, ಹುಲ್ಲು ಮೇಯ್ದು ತಾಯಿಯ ಹಾಲು ಕುಡಿದಿದೆ. ಈ ಯಶಸ್ಸಿನಿಂದ ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ.