ಬೆಂಗಳೂರು: ಹಲವು ಕಂಪನಿಗಳು ಕೊರೊನಾ ವೈರಸ್‌ಜನಕ ಚೀನಾದಿಂದ ಹೊರ ಬರಲು ಮುಂದಾಗಿವೆ. ಇತ್ತ ಚೀನಾದಿಂದ ಹೊರಬರುವ ಎಂಎನ್ ಸಿ ಕಂಪನಿಗಳನ್ನು ತನ್ನತ್ತ ಸೆಳೆಯಲು ರಾಜ್ಯ ಸರ್ಕಾರ ತಯಾರಿ ನಡೆಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದೆ.
ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ 15 ಸದಸ್ಯರ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದ್ದು, ಚೀನಾದಿಂದ ಹೊರ ಬರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯಲು ಬೇಕಾಗಿರುವ ಎಲ್ಲಾ ವ್ಯವಸ್ಥೆ, ಕೈಗಾರಿಕಾ ಸ್ನೇಹಿ ಪರಿಸರ ಸೃಷ್ಟಿಸಲು ಮುಂದಾಗಿದೆ. ಈ ಸಂಬಂಧ ಸಚಿವ ಜಗದೀಶ್ ಶೆಟ್ಟರ್, ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಗೌರವ್ ಗುಪ್ತಾ ಕೈಗಾರಿಕೋದ್ಯಮಿಗಳ ಜೊತೆ ಸಭೆಗಳನ್ನು ನಡೆಸಿ, ಸಲಹೆ ಸೂಚನೆಗಳನ್ನೂ ಪಡೆದಿದ್ದಾರೆ.
ಸರ್ಕಾರ ರೂಪಿಸಿರುವ ಮಾಸ್ಟರ್ ಪ್ಲಾನ್ ಏನು?:
ಸರ್ಕಾರ ಕಳೆದ ತಿಂಗಳಷ್ಟೇ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಕೈಗಾರಿಕೆಗಳು ನೇರವಾಗಿ ರೈತರಿಂದ ಭೂಮಿ ಖರೀದಿಸಲು ಅನುವು ಮಾಡಿಕೊಟ್ಟಿದೆ. ಜೊತೆಗೆ ಭೂ ಖರೀದಿಯಲ್ಲಿನ ಸಂಕೀರ್ಣತೆಯನ್ನು ಸಡಿಲಗೊಳಿಸಿದೆ. ಇದನ್ನೇ ಮುಂದಿಟ್ಟುಕೊಂಡು ಚೀನಾದಿಂದ ಹೊರ ಬರುವ ಕಂಪನಿಗಳಿಗೆ ರತ್ನ ಕಂಬಳಿ ಹಾಕಲು ಮುಂದಾಗಿದೆ.
ಇನ್ನು ಉತ್ತರ ಪ್ರದೇಶ, ಮಧ್ಯಪ್ರದೇಶದಂತೆ ಕಾರ್ಮಿಕ ಕಾನೂನಿಗೂ ತಿದ್ದುಪಡಿ ತರಲು ಮುಂದಾಗಿದೆ. ಅದರಂತೆ ಕಾರ್ಮಿಕ ಒಕ್ಕೂಟ, ಕಾರ್ಮಿಕ ಬಿಕ್ಕಟ್ಟು ಇತ್ಯರ್ಥ, ಕೆಲಸ ಮಾಡುವ ಪರಿಸರ ಬಗೆಗಿನ ನಿಯಮಾವಳಿ, ಗುತ್ತಿಗೆ ಮುಂತಾದವುಗಳಿಗೆ ಸಂಬಂಧಿಸಿದ ಕಾರ್ಮಿಕ ಕಾನೂನನ್ನು ಸಡಿಲಗೊಳಿಸಲೂ ಸರ್ಕಾರ ಚಿಂತನೆ ನಡೆಸಿದೆ. ದೈನಂದಿನ ಕೆಲಸದ ಸಮಯವನ್ನೂ ಎಂಟು ಗಂಟೆಯಿಂದ 12 ಗಂಟೆವರೆಗೆ ವಿಸ್ತರಿಸುವ ಬಗ್ಗೆನೂ ಗಂಭೀರ ಚಿಂತನೆ ಇದೆ.
ಅದೇ ರೀತಿ ಕೈಗಾರಿಕಾ ಸ್ನೇಹಿ ಹೊಸ ರಾಜ್ಯ ಕೈಗಾರಿಕಾ ನೀತಿಯನ್ನು ಇನ್ನೇನು ಜಾರಿಗೆ ತರಲಿದೆ. ಆ ಮೂಲಕ ರಾಜ್ಯದಲ್ಲಿ ದೇಶವಾರು ಮತ್ತು ಕೈಗಾರಿಕಾವಾರು ಕ್ಲಸ್ಟರ್ ರಚಿಸಿ ಹೆಚ್ಚಿನ ಹೂಡಿಕೆ ತರಲು ಸರ್ಕಾರ ನಿರ್ಧರಿಸಿದೆ. ಈ ಕ್ಲಸ್ಟರ್ ಮೂಲಕ ಚೀನಾದಿಂದ ಹೊರ ಬರುವ ಕಂಪನಿಗಳನ್ನು ಆಕರ್ಷಿಸಲು ಸರ್ಕಾರ ಮುಂದಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಕೈಗಾರಿಕೆ ಸ್ಥಾಪನೆಗಳನ್ನು ಅನುಮೋದಿಸುವ ಏಕಗವಾಕ್ಷಿ ವ್ಯವಸ್ಥೆಯನ್ನು ಇನ್ನುಷ್ಟು ಸರಳೀಕರಣ ಗೊಳಿಸಿ, ಫಾಸ್ಟ್ ಟ್ಯ್ರಾಕ್ ಕ್ಲೀಯರೆನ್ಸ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ವಿಶೇಷ ಕೈಗಾರಿಕಾ ಪ್ಯಾಕೇಜ್, ನಿರ್ದಿಷ್ಟ ಟೌನ್ ಶಿಫ್‌ಗಳ ತ್ವರಿತ ಅಭಿವೃದ್ಧಿ ಮೂಲಕ ಎಂಎನ್‌ಸಿ ಕಂಪನಿಗಳನ್ನು ಸೆಳೆಯಲು ಮುಂದಾಗಿದೆ. ಇದರ ಜೊತೆಗೆ ಹೂಡಿಕೆಗಳಿಗೆ ಪೂರಕವಾಗುವಂತೆ ಕಾರ್ಖಾನೆ ಕಾಯ್ದೆ, ಕೈಗಾರಿಕಾ ಬಿಕ್ಕಟ್ಟು ಕಾಯ್ದೆ, ಗುತ್ತಿಗೆ ಕಾರ್ಮಿಕ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ರಾಜ್ಯದ ಟಾರ್ಗೆಟ್ ಕಂಪನಿಗಳೆಷ್ಟು?:
ರಾಜ್ಯ ಸರ್ಕಾರ ಚೀನಾದಿಂದ ಹೊರ ಬರುವ ಸಂಸ್ಥೆಗಳ ಪೈಕಿ ಸುಮಾರು 100 ಸಂಸ್ಥೆಗಳನ್ನು ಕರ್ನಾಟಕದತ್ತ ಸೆಳೆಯುವ ಗುರಿ ಹೊಂದಿದೆ.
ಅದರಲ್ಲಿ ಪ್ರಮುಖವಾಗಿ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಹಾರ್ಡ್ ವೇರ್, ಫಾರ್ಮಸೆಟಿಕಲ್, ವೈದ್ಯಕೀಯ ಸಾಧನ, ಮೊಬೈಲ್, ಜವಳಿ, ಅಟೋಮೊಬೈಲ್ ಕಂಪನಿಗಳಿಗೆ ರತ್ನಕಂಬಳಿ ಹಾಕಲು ಸರ್ಕಾರ ಮುಂದಡಿ ಇಟ್ಟಿದೆ. ಆ ಸಂಸ್ಥೆಗಳನ್ನು ವಿಶೇಷ ಕಾರ್ಯಪಡೆ ಮೂಲಕ ಸಂಪರ್ಕಿಸಲು ಸರ್ಕಾರ ಈಗಾಗಲೇ ಪ್ರಾರಂಭಿಸಿದೆ.
ಚೀನಾ ದೇಶದಿಂದ ಜಪಾನ್, ಅಮೆರಿಕಾ, ಕೊರಿಯಾ, ಫ್ರಾನ್ಸ್, ಜರ್ಮನಿ ದೇಶದ ಕಂಪನಿಗಳು ಹೊರಬರಲು ಮುಂದಾಗಿವೆ. ಅದಕ್ಕಾಗಿ ಕರ್ನಾಟಕದಲ್ಲಿನ ಅಮೆರಿಕಾ, ಕೊರಿಯಾ, ತೈವಾನ್, ಫ್ರಾನ್ಸ್ ಹಾಗೂ ಜರ್ಮನಿ ಕಂಪನಿಗಳ ಪ್ರತಿನಿಧಿಗಳ ಮೂಲಕ ಚೀನಾದಿಂದ ಹೊರಬರುವ ಕಂಪನಿಗಳನ್ನು ಸೆಳೆಯುವ ಕಾರ್ಯತಂತ್ರವನ್ನು ಸರ್ಕಾರ ರೂಪಿಸಿದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.