ಬೆಂಗಳೂರು: ತಮ್ಮ ಹುಟ್ಟುಹಬ್ಬದ ದಿನವಾದ ಮೇ 18 ರಂದು ಅಭಿಮಾನಿಗಳು, ಕಾರ್ಯಕರ್ತರು ಸಡಗರ ಸಂಭ್ರಮದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ವಿನಂತಿಸಿದ್ದಾರೆ.
ಕೊರೊನಾ ಮಹಾಮಾರಿಯಿಂದ ರಾಜ್ಯದ ಜನತೆ ಸಂಕಷ್ಟ ಮತ್ತು ನೋವಿನಲ್ಲಿ ತತ್ತರಿಸುತ್ತಿರುವಾಗ ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕಾರ್ಯಕರ್ತರ, ಅಭಿಮಾನಿಗಳ ಅಭಿಮಾನ ಹಾರೈಕೆ ರೂಪದಲ್ಲಿ ತಾವಿರುವಲ್ಲಿಂದಲೇ ವ್ಯಕ್ತವಾಗಲಿ ಎಂದು ಕೋರಿದ್ದಾರೆ.
"ಈಗ ನಾವು ನಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆಯನ್ನು ತೋರಿಸುವ ಸಮಯದಲ್ಲಿದ್ದೇವೆ. ಆದುದರಿಂದ ನನ್ನ ಹುಟ್ಟು ಹಬ್ಬದ ನಿಮಿತ್ತ ಹಾರ, ತುರಾಯಿ, ಕೇಕ್, ಸಿಹಿ ಎಂದು ಅನಗತ್ಯವಾಗಿ ದುಂದುವೆಚ್ಚ ಮಾಡುವ ಬದಲಿಗೆ ಅದನ್ನೇ ನಿಮ್ಮ ಭಾಗದ ಕೊರೊನಾ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ, ಅವರ ಅಗತ್ಯಗಳ ಪೂರೈಕೆಗೆ ಬಳಸಿದಲ್ಲಿ ಅದು ನಿಜಕ್ಕೂ ಸದುಪಯೋಗವಾಗುತ್ತದೆ, ದೇವರು ಮೆಚ್ಚುತ್ತಾನೆ. ನನ್ನ ಅಭಿಮಾನಿಗಳ ಈ ಸೇವಾ ಕಾರ್ಯ ನನಗೂ ಸಂತೋಷ ನೀಡುತ್ತದೆ. ಅಭಿಮಾನಿಗಳು ಮತ್ತು ಕಾರ್ಯಕರ್ತರು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು." ಎಂದು ದೇವೇಗೌಡರು ಪತ್ರದ ಮೂಲಕ ಕೋರಿದ್ದಾರೆ.