ಬೆಂಗಳೂರು: ನಾವು ಪ್ರತಿಭಟನೆ ಮಾಡೋದು, ನಮ್ಮ ನೋವು ನಮ್ಮ ಪಕ್ಕದ ರಾಜ್ಯದ ಅಣ್ಣ ತಮ್ಮಂದಿರಿಗೆ ಅರ್ಥವಾಗಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಹೇಳಿದರು. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಇಂದು ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ನಡೆಯುತ್ತಿರುವ ಬೆಂಗಳೂರು ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ನಾವು ಯಾವುದೇ ಆಕ್ರೋಶ ವ್ಯಕ್ತಪಡಿಸಿಲ್ಲ. ನಮ್ಮ ಪಕ್ಕದ ರಾಜ್ಯದಲ್ಲಿ ರಾಜಕೀಯ ಮುಖಂಡರುಗಳು ಇದ್ದಾರೆ. ಈ ಬಗ್ಗೆ ಅವರು ಏನು ನಿಲುವು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗಬೇಕು. ನಮ್ಮ ನೋವು ಅರ್ಥ ಮಾಡಿಕೊಂಡು ಸ್ವಲ್ಪವನ್ನಾದರೂ ಬದಲಾವಣೆ ಮಾಡಿಕೊಳ್ಳಿ ಎನ್ನುವ ಸಂದೇಶ ಕೊಡೋಕೆ ಈ ಬಂದ್ ಮಾಡ್ತಿದ್ದಾರೆ. ಬಂದ್ ಶಾಂತಿಯುತವಾಗಿರಲಿ. ಯಾವುದೇ ಸಂಘರ್ಷ ಬೇಡ. ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು ಎಂದು ಮನವಿ ಮಾಡಿದರು.
ತಮಿಳುನಾಡಿನ ರೈತರು ನಮ್ಮ ನೋವು ಅರ್ಥ ಮಾಡಿಕೊಳ್ಳಬೇಕು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಎಲ್ಲರೂ ಬಂದ್ಗೆ ಬೆಂಬಲ ಕೊಟ್ಟಿದ್ದಾರೆ. ಮುತ್ತಿಗೆ ಹಾಕುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.
ಬೆಂಗಳೂರು ಬಂದ್ ವೇಳೆ ರೈತರನ್ನು ವಶಕ್ಕೆ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಡ, ನಾಳೆ ಬೆಳಗ್ಗೆ ಈ ಬಗ್ಗೆ ಮಾತನಾಡುತ್ತೇನೆ. ಇವತ್ತು ರೈತಪರ, ಕನ್ನಡಪರ ಸಂಘಟನೆಗಳು ಮಾಡುತ್ತಿರುವ ಬಂದ್ ಶಾಂತಿಯುತವಾಗಿ ನಡೆಯಲೆಂದು ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ಇದನ್ನೂ ಓದಿ: ಕಾವೇರಿ: ಪ್ರತಿಭಟನಾಕಾರರು ಪೊಲೀಸರ ವಶಕ್ಕೆ, ಬೆಂಗಳೂರು ಬಂದ್ಗೆ ಮಿಶ್ರ ಪ್ರತಿಕ್ರಿಯೆ